ಬೆಂಗಳೂರು: ನೀರಿನ ಸಂಪ್ ಸ್ವತ್ಛಗೊಳಿಸುವ ವೇಳೆ ವಿದ್ಯುತ್ ಪ್ರವಹಿಸಿ ಸ್ವತ್ಛತಾ ಕಾರ್ಮಿಕ ಮೃತಪಟ್ಟಿರುವ ಘಟನೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಓಂ ಶಿವಶಕ್ತಿನಗರ ನಿವಾಸಿ ಆದಿನಾರಾಯಣ ನಾಯ್ಕ (45) ಮೃತ ದುರ್ದೈವಿ.
ಮಂಗಳವಾರ ಮಧ್ಯಾಹ್ನ ಜಯನಗರದ ನಾಲ್ಕನೇ ಬ್ಲಾಕ್‌ನ ಉದ್ಯಮಿ ಸಂತೋಷ್ ಎಂಬುವರ ಮನೆಯ ನೀರಿನ ಸಂಪ್ ಸ್ವತ್ಛಗೊಳಿಸುವ ವೇಳೆ ಘಟನೆ ನಡೆದಿದೆ. ಈ ಸಂಬಂಧ ಸುರಕ್ಷತಾ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ ಆರೋಪದ ಮೇಲೆ ಮನೆ ಮಾಲೀಕ ಸಂತೋಷ್, ಗುತ್ತಿಗೆದಾರ ಚಂದ್ರು ವಿರುದ್ಧ ಪ್ರಕರಣ ದಾಖಲಾಗಿತ್ತು.ಪರಿಚಯಸ್ಥ ಗುತ್ತಿಗೆದಾರ ಚಂದ್ರು, ಮಂಗಳವಾರ ಆದಿನಾರಾಯಣ, ಶ್ರೀನಿವಾಸ್‌ರನ್ನು ನೀರಿನ ಸಂಪರ್ ಕ್ಲೀನಿಂಗ್ ಕೆಲಸಕ್ಕೆ ಕರೆದೊಯ್ದಿದ್ದರು. ಮನೆ ಮಾಲೀಕ ಸಂತೋಷ್ ಎಂಬುವರ ನೀರಿನ ಸಂಪ್‌ಗೆ ಆದಿನಾರಾಯಣ ಇಳಿದ ಕೂಡಲೇ ವಿದ್ಯುತ್ ಪ್ರವಹಿಸಿದ್ದರಿಂದ ಕಿರುಚಿಕೊಂಡಿದ್ದಾರೆ. ಅದನ್ನು ಗಮನಿಸಿದ ಶ್ರೀನಿವಾಸ್ ವಿದ್ಯುತ್ ಸ್ವಿಚ್ ಅಫ್ ಮಾಡಿದ್ದರು. ಆದರೆ, ವಿದ್ಯುತ್ ಶಾಕ್‌ಗೊಳಗಾಗಿದ್ದ ಆದಿನಾರಾಯಣರ ನಿತ್ರಾಣಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೋಟಾರ್‌ಗೆ ಅಳವಡಿಸಿದ್ದ ವೈಯರ್ ಡ್ಯಾಮೇಜ್:
ನೀರಿನ ಸಂಪ್‌ನಲ್ಲಿ ವಿದ್ಯುತ್ ಮೋಟಾರ್‌ಗೆ ಅಳವಡಿಸಿದ್ದ ವೈಯರ್ ಡ್ಯಾಮೇಜ್‌ನಿಂದ ವಿದ್ಯುತ್ ಪ್ರವಹಿಸಿದೆ. ಜತೆಗೆ, ಸಂಪ್‌ಗೆ ಇಳಿಸುವ ಮೊದಲು ವಿದ್ಯುತ್ ಸ್ವಿಚ್ ಆಫ್ ಮಾಡಿಲ್ಲ. ಈ ಕಾರಣಕ್ಕೆ ದುರಂತ ಸಂಭವಿಸಿರುವ ಸಾಧ್ಯತೆಯಿದೆ. ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಪೊಲೀಸರು ಹೇಳಿದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.