Advertisement

ಅನಗತ್ಯ ವಿಳಂಬ ಮಾಡದೆ ಕೆಲಸ ಮಾಡಿ

03:55 PM Feb 05, 2018 | Team Udayavani |

ರಾಯಚೂರು: ಜಿಲ್ಲಾಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಸಲು ಸಾಧ್ಯ. ಅನಗತ್ಯ ವಿಳಂಬ ಮಾಡದೆ ಕಾರ್ಯೋನ್ಮುಖರಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ.ರೇವಣ್ಣ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಏನು. ಬೇಸಿಗೆಯಲ್ಲಿ ಯಾವ ರೀತಿ ನಿಭಾಯಿಸುವಿರಿ ಎಂದು ಸಚಿವರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿಗಳು, ಜಿಲ್ಲೆಯಲ್ಲಿ ಈ ವರ್ಷ 73 ಶುದ್ಧ
ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ. ಅದರಲ್ಲಿ 13 ಪರಿಶಿಷ್ಟ ಜಾತಿ, 6 ಪರಿಶಿಷ್ಟ ಪಂಗಡ, 50 ಸಾಮಾನ್ಯ ವರ್ಗದವರಿಗೆ ವಿಂಗಡಿಸಲಾಗಿದೆ. ಸಾವಿರ ಜನಸಂಖ್ಯೆ ಇರುವ ಪ್ರದೇಶಕ್ಕೆ ಶುದ್ಧ ಕುಡಿಯುವ ಘಟಕ ಸ್ಥಾಪಿಸಲಾಗುತ್ತದೆ. ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.

ಜಿಲ್ಲೆಯಲ್ಲಿ 18 ಸಾವಿರ ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. ನೋಂದಣಿಯಾದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮದುವೆ, ಶಿಕ್ಷಣ ಸೌಲಭ್ಯಕ್ಕಾಗಿ ಮೂರು ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಆರತಿ ತಿಳಿಸಿದರು. ಕಟ್ಟಡ ಕಾರ್ಮಿಕರು ವಲಸೆ ಹೋಗದಂತೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಸೌಲಭ್ಯಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಚಿವರು ತಿಳಿಸಿದರು. 

ಡಿಡಿಪಿಐ ಬಿ.ಕೆ. ನಂದನೂರು ಮಾತನಾಡಿ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 4,300 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಅವರನ್ನು ಈಗಾಗಲೇ ಗುರುತಿಸಿ ಅವರಿಗೆ ನಿತ್ಯ ಒಂದು ಗಂಟೆ ವಿಶೇಷ ಬೋಧನೆ ಮಾಡಲಾಗುತ್ತಿದೆ. ಅವರಿಗೆ ಪಾಸಿಂಗ್‌ ಪ್ಯಾಕೇಜ್‌ ನೀಡಲಾಗುತ್ತದೆ ಎಂದು ವಿವರಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಶಾಂತ ಮಾತನಾಡಿ, ವಿದ್ಯಾಸಿರಿಯಲ್ಲಿ 2,368 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.
 
ಎಂಎಲ್‌ಸಿ ಎನ್‌.ಎಸ್‌.ಬೋಸರಾಜು, ಸಂಸದ ಬಿ.ವಿ.ನಾಯಕ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಅಭಿರಾಂ ಜಿ. ಶಂಕರ, ಎಡಿಸಿ ಗೋವಿಂದ ರೆಡ್ಡಿ, ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರ್‌, ನಗರಾಭಿವೃದ್ಧಿ ಕೋಶದ ಅಧಿಕಾರಿ ಈರಣ್ಣ ಬಿರಾದಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next