Advertisement

ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಗಾರಿ ಅಪೂರ್ಣ

09:25 PM Jun 04, 2019 | Lakshmi GovindaRaj |

ಗೌರಿಬಿದನೂರು: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಿಮೆಂಟ್‌ರಸ್ತೆ ಮತ್ತು ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ಒಂದೂವರೆ ವರ್ಷವಾದರೂ ಯಾವುದೇ ಕ್ರಮಕೈಗೊಳ್ಳದಿರುವುದು ಶೋಚನೀಯ ಸಂಗತಿಯಾಗಿದೆ.
ಇದರ ಪರಿಣಾಮ ಬೇಸಿಗೆಯ ಬೇಗೆ ಜೊತೆಗೆ ಚರಂಡಿ ನೀರು ತುಂಬಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಗರವಿದೆ.

Advertisement

ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಮತ್ತು ಚರಂಡಿಗಳನ್ನು ದುರಸ್ತಿಗೊಳಿಸಿ ಹಾಗೂ ಹೊಸದಾಗಿ ನಿರ್ಮಿಸಲು ನಗರೋತ್ಥಾನ ಯೋಜನೆಯಲ್ಲಿ 4.27ಕೋಟಿ ರೂ.ಗಳ ಟೆಂಡರ್‌ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದಿದೆ. ಕಾಮಗಾರಿ ಪೂರ್ಣಗೊಳ್ಳದೇ ಸ್ಥಗಿತಗೊಂಡಿದ್ದು ರಸ್ತೆಗಳು ಪೂರ್ಣಗೊಳ್ಳದೇ ಚರಂಡಿಗಳ ದುರಸ್ತಿಯೂ ಪ್ರಾಂಭವಾಗದೆ, ಚರಂಡಿ ಕೊಳಚೆ ನೀರು ತುಂಬಿ ರೋಗ ಭೀತಿಯಲ್ಲಿ ಜನತೆ ಜೀವನ ಸಾಗಿಸುವಂತಾಗಿದೆ.

ಗೌರಿಬಿದನೂರು ನಗರಸಭೆಗೆ ನಗರೋತ್ಥಾನ ಯೋಜನೆ 3ರಲ್ಲಿ 4.27ಕೋಟಿ ರೂ. ಟೆಂಡರ್‌ ನ್ನು 19 ಫೆಬ್ರವರಿಯಲ್ಲಿ ಪ್ರಾರಂಭಿ ಸಿ 18ನೇ ನವೆಂಬರ್‌ 2018ರಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದ್ದರು. 9ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಒಂದೂವರೆ ವರ್ಷ ಕಳೆದರೂ ಬಹುತೇಕ ಕಾಮಗಾರಿ ಪ್ರಾರಂಭವಾಗಿಲ್ಲ ಎನ್ನಲಾಗಿದೆ.

ನಗರದ ಬಿ.ಎಚ್‌. ರಸ್ತೆ ಅಗಲೀಕರಣದ ನಂತರ ರಸ್ತೆಯ ಎರಡೂ ಕಡೆಗಳಲ್ಲಿ ಹೊಸದಾಗಿ ನಿರ್ಮಿಸಿದ್ದು ಸುಮಾರು 9ಕ್ಕೂ ಹೆಚ್ಚು ವಾರ್ಡ್‌ ಗಳಿಂದ ಬರುವಂತಹ ತ್ಯಾಜ್ಯ ನೀರು ಸರಾಗವಾಗಿ ಹರಿಯುತ್ತಿಲ್ಲ ಮಾಧವ ನಗರ ಮರಿಯಮ್ಮ ದೇವಸ್ಥಾನ ಮತ್ತು ಅಭಿಲಾಷ್‌ ವೃತ್ತದಲ್ಲಿ ಮಾತ್ರ ಕೆಲವೆಡೆ ನೀರು ಹರಿಯುತ್ತಿದ್ದು, ಉಳಿದಂತೆ ನಗರದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೂ ಸುಮಾರು 2.5 ಕಿ.ಮೀ. ಉದ್ದವಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಸಾಗುತ್ತಿಲ್ಲ ಇದು ಒಂದೆಡೆಯಾದರೆ ನಗರಸಭೆಯ ನಗರೋತ್ಥಾನ ವಿಶೇಷ ನಿಧಿ,

ಪುರಸಭೆ ನಿಧಿ, 14ನೇ ಹಣಕಾಸು ನಿಧಿ ಸೇರಿದಂತೆ ಹಲವಾರು ನಿಧಿಗಳನ್ನು ಬಳಸಿಕೊಂಡು ಒಟ್ಟಾರೆ 25ಕೋಟಿ ರೂ.ಗಳಷ್ಟು ಕಾಮಗಾರಿಗಳಿಗೆ ಚಾಲನೆ ನೀಡಿದ್ದರೂ ವೈಜ್ಞಾನಿಕವಾಗಿ ಮಾಡದೇ ಇರುವ ಕಾರಣ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆ ಮತ್ತು ಅಂಗಡಿ ಮನೆಗಳಿಗೆ ನುಗ್ಗುತ್ತದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Advertisement

ಪ್ರತಿವಾರ್ಡುಗಳಲ್ಲಿ ಚಂರಡಿ ಮತ್ತು ಸಿಮೆಂಟ್‌ ರಸ್ತೆಗಳಾಗಬೇಕು ಎಂಬ ಕಾರಣದಿಂದ ಎಲ್ಲಾ ಸದಸ್ಯರೂ ಸೇರಿ ಅನುಮೋದನೆ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಗುತ್ತಿಗೆದಾರ ಅಪೂರ್ಣಕಾಮಗಾರಿ ಮಾಡಿ ನಾಪತ್ತೆಯಾಗಿದ್ದಾನೆ. ಅಧಿಕಾರಿಗಳು ಶಾಮೀಲಾಗಿರುವುದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಮಾರ್ಕೆಟ್‌ ಮೋಹನ್‌, ನಗರಸಭೆ ಮಾಜಿ ಸದಸ್ಯ

ನಾನು ಆಯುಕ್ತನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡು ಬಾರಿ ಗುತ್ತಿಗೆದಾರನಿಗೆ ನೋಟೀಸ್‌ ನೀಡಿ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸೂಚಿಸಿದ್ದೇನೆ ಅದನ್ನೂ ಮೀರಿ ಗುತ್ತಿಗೆದಾರ ವಿಳಂಬ ಮಾಡಿದರೆ ದಂಡವಿಧಿಸುವ ಜೊತೆಗೆ ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಿಗೆ ವರದಿನೀಡಲಾಗುವುದು.
-ಉಮಾಕಾಂತ್‌, ಆಯುಕ್ತರು ನಗರಸಭೆ ಗೌರಿಬಿದನೂರು.

Advertisement

Udayavani is now on Telegram. Click here to join our channel and stay updated with the latest news.

Next