Advertisement

ಬಾಲ್ಯವಿವಾಹ ತಡೆಗೆ ಸಮನ್ವಯದಿಂದ ಕೆಲಸ ಮಾಡಿ

11:47 AM Jul 14, 2017 | Team Udayavani |

ಮೈಸೂರು: ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಚಿಸಿರುವ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

ಸರಿಯಾಗಿ ತಿಳಿಯುವುದಿಲ್ಲ: ಸಭೆಯಲ್ಲಿ ಭಾಗವಹಿಸಿದ್ದ ಸಾಂತ್ವಾನ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ದೂರು ದಾಖಲಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಎಫ್ಐಆರ್‌ ದಾಖಲಿಸುವ ಬಗ್ಗೆ ಹಾಗೂ ಬಾಲ್ಯ ವಿವಾಹದ ಬಗ್ಗೆ ದಾಖಲಿಸುವ ದೂರುಗಳ ಬಗ್ಗೆ ಕೈಗೊಂಡ ಕ್ರಮಗಳು ಸರಿಯಾಗಿ ತಿಳಿಯುವುದಿಲ್ಲ ಎಂದು ಗಮನ ಸೆಳೆದರು.

ಸೂಚನೆ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ, ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಅವರು ಒಟ್ಟಿಗೆ ಸಭೆ ನಡೆಸಬೇಕು. ಬಾಲ್ಯವಿವಾಹ ತಡೆಗಟ್ಟಲು ತಾಲೂಕು, ಜಿಲ್ಲಾ ಹಾಗೂ ಗ್ರಾಮ ಮಟ್ಟದಲ್ಲಿ ತಂಡ ರಚಿಸಿ. ತಂಡದಲ್ಲಿ ಪ್ರತಿಯೊಬ್ಬರಿಗೆ ನಿಗಧಿತವಾದ ಕೆಲಸವನ್ನು ಹಂಚಿಕೆ ಮಾಡಿ ಜವಾಬ್ದಾರಿ ನೀಡಿ ಎಂದರು.

ಕೆಲಸ ನಿಗದಿ: ಬಾಲ್ಯವಿವಾಹ ತಡೆಗಟ್ಟಿದ ಸಂದರ್ಭ, ಬಾಲ್ಯ ವಿವಾಹ ನಡೆದಿರುತ್ತದೆ ದಾಖಲೆಗಳು ಇರುವುದಿಲ್ಲ, ಬಾಲ್ಯ ವಿವಾಹದ ಬಗ್ಗೆ ದೂರು ಬರುತ್ತದೆ ಸ್ಥಳಕ್ಕೆ ತಲುಪುವುದರಲ್ಲಿ ಬಾಲ್ಯ ವಿವಾಹ ನಡೆದು ಹೋಗಿರುತ್ತದೆ ಬಾಲ್ಯ ವಿವಾಹವಾದ ಹುಡುಗಿ ಹಾಗೂ ಪೋಷಕರು ಸಿಗುತ್ತಾರೆ. ಈ ಮೂರು ಸನ್ನಿವೇಶವನ್ನು ಮನದಲ್ಲಿಟ್ಟಿಕೊಂಡು ಸಭೆ ನಡೆಸಿ. ಎಫ್ಐಆರ್‌ ದಾಖಲಿಸುವವರು ಯಾರು, ಸಾಕ್ಷಿ ದೊರೆಯದಿದ್ದಲ್ಲಿ ಅಲ್ಲಿಯ ಸುತ್ತಮುತ್ತಲಿನ ಜನರಿಂದ ಯಾವ ರೀತಿ ದಾಖಲೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಇಲಾಖೆಗಳಿಗೆ ಕೆಲಸ ನಿಗಧಿ ಮಾಡಿ ಎಂದರು.

ಸಭೆ ನಡೆಸಿ: ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲೂ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಸಮಿತಿಗಳ ಸಭೆಯನ್ನು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆಸಬೇಕಿರುತ್ತದೆ. ಆದರೆ ಇದು ನಡೆಯುತ್ತಿಲ್ಲ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರೆ ಬಹಳಷ್ಟು ಸಮಸ್ಯೆಗಳು ತಾಲ್ಲೂಕು ಹಂತದಲ್ಲೇ ಪರಿಹಾರವಾಗುತ್ತದೆ ಎಂದು ತಿಳಿಸಿದರು.

Advertisement

ಅರಿವು ಮೂಡಿಸಿ: ಮೈಸೂರಿನ ಕುರಿಮಂಡಿ ಹಾಗೂ ಗುಜರಿಗಳಲ್ಲಿ ಬಾಲಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವುದಾಗಿ ಕೆಲವು ಸಂಸ್ಥೆಗಳು ಸಭೆಗೆ ಮಾಹಿತಿ ನೀಡಿದಾಗ ಮೊದಲು ಬಾಲಕಾರ್ಮಿಕರು ಇರುವ ಸ್ಥಳಗಳನ್ನು ಪತ್ತೆ ಮಾಡಿ. ಆ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಮಕ್ಕಳ ಮನವೊಲಿಸಿ ಶಾಲೆಗೆ ಕರೆತನ್ನಿ. ಅಂಗಡಿ ಮಾಲೀಕರಿಗೂ ಸಹ ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳದಂತೆ ತಿಳಿಸಿ.

ಅರಿವು ಮೂಡಿಸಿದ ನಂತರವು ಅಂಗಡಿ ಮಾಲೀಕರು ಬಾಲಕಾರ್ಮಿಕರನ್ನು ನಿಯೋಜಿಸಿಕೊಂಡರೆ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಮಕ್ಕಳ ಸಹಾಯವಾಣಿಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 141 ಕರೆಗಳು ಬಂದಿದ್ದು, ಅವುಗಳಲ್ಲಿ 99 ಪ್ರಕರಣಗಳು ಮಾತ್ರ ಬಾಲ್ಯ ವಿವಾಹಕ್ಕೆ ಸಂಬಂಧಿಸಿರುತ್ತದೆ. ಅವುಗಳಲ್ಲಿ 63 ಬಾಲ್ಯ ವಿವಾಹವನ್ನು ತಡೆಗಟ್ಟಲಾಗಿದೆ.

12 ಪ್ರಕರಣಗಳು ಬೇರೆ ಜಿಲ್ಲೆಗಳಿಗೆ ಸಂಬಂಧಿಸಿದ್ದು ಬೇರೆ ಜಿಲ್ಲೆಗಳ ಮಕ್ಕಳ ಸಹಾಯವಾಣಿಗೆ ವಹಿಸಲಾಗಿದೆ. 4 ಪ್ರಕರಣಗಳು ಬಾಲ್ಯವಿವಾಹವಾಗಿರುವುದಿಲ್ಲ ಎಂದು ದೃಢೀಕರಿಸಿದೆ. ಇನ್ನುಳಿದ ಪ್ರಕರಣಗಳಲ್ಲಿ ಬಾಲ್ಯ ವಿವಾಹವಾದ ಸ್ಥಳಕ್ಕೆ ಹೋದಾಗ ಯಾರು ಸಹ ದೊರೆತಿರುವುದಿಲ್ಲ ಎಂದು ಮಕ್ಕಳ ಸಹಾಯವಾಣಿಯ ಸಮನ್ವಯಾಧಿಕಾರಿ ಧನಂಜಯ ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧ, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಪದ್ಮ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲ ಖರೆ, ಮೈಸೂರು ಮಹಾ ನಗರಪಾಲಿಕೆ ಹೆಚ್ಚುವರಿ ಆಯುಕ್ತ ರಾಜು, ಡಿಡಿಪಿಐ ಎಚ್‌.ಆರ್‌.ಬಸಪ್ಪ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next