Advertisement

ಸೇವಾ ಮನೋಭಾವದಿಂದ ಕೆಲಸ ಮಾಡಿ ವಿಶ್ವಾಸ ಗಳಿಸಿ: ಕಾಗೇರಿ

10:40 AM Apr 06, 2022 | Team Udayavani |

ಮಹಾನಗರ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪುಣ್ಯದ ಕೆಲಸ. ಅನಾರೋಗ್ಯದಿಂದ ಬಳಲುತ್ತಿರುವವರ ಪಾಲಿಗೆ ವೈದ್ಯರ ಜತೆಗೆ ನರ್ಸಿಂಗ್‌ ಹಾಗೂ ಇತರ ವಿಭಾಗದವರೂ ದೇವರಂತೆ ಕಾಣುತ್ತಾರೆ. ಆದ್ದರಿಂದ ಸೇವಾ ಮನೋಭಾವದಲ್ಲಿ ಕೆಲಸ ಮಾಡುವ ಮೂಲಕ ವಿಶ್ವಾಸ ಗಳಿಸಬೇಕು ಎಂದು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ನೀರುಮಾರ್ಗದಲ್ಲಿರುವ ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಪದವಿ ಪ್ರಧಾನ ಮತ್ತು ವಾರ್ಷಿಕ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕ್ಷೇತ್ರವೂ ವಾಣಿಜ್ಯೀಕರಣವಾಗುತ್ತಿದ್ದು, ಅದನ್ನು ತಡೆಯಬೇಕಾದರೆ, ಸೇವಾದೃಷ್ಟಿಕೋನ ಬರಬೇಕು. ಇದು ರಾಷ್ಟ್ರೀಯ ಜವಾಬ್ದಾರಿಯೂ ಆಗಿದೆ. ದೇಶದಲ್ಲಿ ಕರ್ನಾಟಕ ಆರೋಗ್ಯ ಕ್ಷೇತ್ರ ಕೇಂದ್ರವಾದರೆ, ರಾಜ್ಯದಲ್ಲಿ ಮಂಗಳೂರಿಗೆ ಈ ಪಟ್ಟವಿದೆ ಎಂದರು.

ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇಡೀ ಭಾರತವೇ ಕಾಣುತ್ತದೆ. ನಾನಾ ರಾಜ್ಯಗಳ ವಿದ್ಯಾರ್ಥಿಗಳು ಒಂದೆಡೆ ಕಲಿಯುತ್ತಿರುವುದರಿಂದ ಇದೊಂದು ವಿಶಿಷ್ಟವಾದ ಶಿಕ್ಷಣ ಸಂಸ್ಥೆ. ಇದರ ಜತೆಯಲ್ಲಿ ವಿದೇಶದ ವಿದ್ಯಾರ್ಥಿಗಳು ಕೂಡ ಕಲಿಯುವುದರಿಂದ ಭಾರತದ ಜತೆಗೆ ವಿಶ್ವದ ಸಂಸ್ಥೆ ಎನ್ನಬಹುದು. ಮಂಗಳಾ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಡಾ| ಗಣಪತಿ ಅವರ ಘನತೆ, ಗೌರವದ ಜತೆಗೆ ಅವರ ತ್ಯಾಗ, ಸೇವಾ ಮನೋಭಾವನೆ ಎದ್ದು ಕಾಣುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರುಣಾಚಲ ಪ್ರದೇಶದ ಮಂಜುಶ್ರೀ ವಿದ್ಯಾಪೀಠ ಆಶ್ರಮದ ಸಂಸ್ಥಾಪಕಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಲಾಮಾ ತುಪ್ಟೆನ್‌ ಪುನ್‌ಸ್ಟೋಕ್‌, ಮಂಗಳಾ ಸಂಸ್ಥೆಯ ಶಿಕ್ಷಣ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಂಗಳಾ ಸಂಸ್ಥೆ ವತಿಯಿಂದ 2.5 ಲಕ್ಷ ರೂ. ಮೊತ್ತವನ್ನು ಮಂಜುಶ್ರೀ ವಿದ್ಯಾಪೀಠಕ್ಕೆ ದೇಣಿಗೆಯಾಗಿ ನೀಡಲಾಯಿತು. ಸ್ಪೀಕರ್‌ ಕಾಗೇರಿ ಅವರು, ರ್‍ಯಾಂಕ್‌ ಪಡೆದ 8 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ವಿತರಿಸಿದರು.

Advertisement

ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಗಣಪತಿ ಪಿ. ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಫಿಸಿಯೋಥೆರಪಿ ಅಸೋಸಿಯೇಶನ್‌ ಕರ್ನಾಟಕ ಅಧ್ಯಕ್ಷ ಡಾ| ಯು.ಟಿ. ಇಫ್ತಿಕರ್‌ ಅಲಿ, ಸಂಸ್ಥೆಯ ಉಪಾಧ್ಯಕ್ಷೆ ಡಾ| ಅನಿತಾ ಜಿ. ಭಟ್‌, ಟ್ರಸ್ಟಿ ಶಂಕರ್‌ ಭಟ್‌, ಮಂಗಳಾ ಕಾಲೇಜ್‌ ಆಫ್‌ ನರ್ಸಿಂಗ್‌ ಡಾ| ಮೇರಿ ಇ. ಪಿಂಟೊ, ಅಲೈಡ್‌ ಹೆಲ್ತ್‌ ಸೈನ್ಸ್‌ ಪ್ರಾಂಶುಪಾಲೆ ಪ್ರತಿಜ್ಞಾ ಸುಹಾಸಿನಿ ಜಿ.ಆರ್‌., ಫಿಸಿಯೋಥೆರಪಿ ಪ್ರಾಂಶುಪಾಲ ಡಾ| ಭರತ್‌ ಕೆ.ಎಚ್‌. ಉಪಸ್ಥಿತರಿದ್ದರು.

ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ಭಾಗವಹಿಸಿದ್ದರು. ಮಂಗಳಾ ಸ್ಕೂಲ್‌ ಆಫ್‌ ನರ್ಸಿಂಗ್‌ ಪ್ರಾಂಶುಪಾಲೆ ಪೂಜಾ ಅಶೋಕನ್‌ ಅವರು ಪದವಿ ಪಡೆದ 450 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವಿಜೇತಾ ಶ್ರೀನಾಥ್‌ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಸಹಾಯಕ ಪ್ರಾಧ್ಯಾಪಕರಾದ ಅಭಿನೇತಾ ಮತ್ತು ಯೋಗೀತಾ ನಿರೂಪಿಸಿದರು. ಅಕಾಡೆಮಿಕ್‌ ಅಡ್ವೆ,ಸರ್‌ ಡಾ| ಮೊದೀನ್‌ ನಫ್ಸೀರ್‌ ಟಿ.ಎ. ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next