Advertisement

ಒಗ್ಗಟ್ಟಾಗಿ ದುಡಿಯಿರಿ, ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ: ಖರ್ಗೆ ಖಡಕ್ ಸಂದೇಶ

06:18 PM Dec 10, 2022 | Team Udayavani |

ಕಲಬುರಗಿ: ನಾವು-ನಾವು ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ದುಡಿಯಿರಿ, ಕಾಂಗ್ರೆಸ್ ಪಕ್ಷ ಅಧಿಕಾರಿ ತನ್ನಿ, ನಂತರ ಮುಖ್ಯಮಂತ್ರಿ ಯಾರೆಂಬುದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ನೀಡಿದರು.

Advertisement

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಅಭಿನಂದನೆ ಸ್ವೀಕರಿಸಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೈ ಜೋಡಿಸಿ ಮುನ್ನೆಡೆಯಿರಿ, ನಮಗೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಸಹಕಾರದ ಅಧಿಕಾರ ಬೇಕು. ನಮಗೆ ಅವರು ಬೇಡ- ಇವರು ಬೇಡ ಎಂಬುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನಾವೆಲ್ಲರೂ ಒಂದಾಗಿ ಕೆಲಸ ಮಾಡದಿದ್ದರೆ ಜನರಿಗೆ ಮೋಸ ಮಾಡಿದಂತಾಗುತ್ತದೆ. ಆದ್ದರಿಂದ ನಾವೆಲ್ಲರೂ ಒಂದಾಗಿ ದುಡಿಯೋಣ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಮಗೆ ಗೌರವ ನೀಡಿದಂತಾಗುತ್ತದೆ ಎಂದು ಡಾ. ಖರ್ಗೆ ಮಾರ್ಮಿಕವಾಗಿ ಹೇಳಿದರು.

ನಾನು ಯಾವುದನ್ನು ಬಯಸಲಿಲ್ಲ. ಎಲ್ಲವೂ ನನಗೆ ಹುಡುಕಿಕೊಂಡು ಬಂದಿವೆ. ನಾನು ಚುನಾವಣೆಗೆ ನಿಲ್ಲುವ ಮನಸಿರಲಿಲ್ಲ‌. ಆಗ ಸೋನಿಯಾ ಗಾಂಧಿ ಅವರು ಒತ್ತಾಯ ಮಾಡಿದರು. ಅಂದು ಗುಲಬರ್ಗಾದಲ್ಕಿ ನಡೆದ ಸಭೆಯಲ್ಲಿ ನಾನು ಆರಿಸಿ ಬಂದರೆ ಈ‌ಭಾಗಕ್ಕೆ ಆರ್ಟಿಕಲ್ 371(ಜೆ) ಜಾರಿಗೆ ತರುವ ಭಾಷೆ ನೀಡಿದರೆ ನಾನು ‌ಚುನಾವಣೆ ನಿಲ್ಲುತ್ತೇನೆ ಎಂದೆ. ಎಲ್ಲ ಬಗೆಯ ವಿಚಾರ ಚರ್ಚೆ ಮಾಡಿದ‌ ನಂತರ ಭಾಷೆ ನೀಡಿದರು. ಅದರಂತೆ ನಾನು‌ ಮೊದಲ ಬಾರಿಗೆ ಸಂಸತ್ತಿಗೆ ಸ್ಪರ್ಧೆ ಮಾಡಿದೆ. ಆ ನಂತರ ಎಲ್ಲ ಸಂಸದರನ್ನು ವೈಯಕ್ತಿಕ ಭೇಟಿ ಮಾಡಿ ನಮಗೆ ಬೆಂಬಲ ನೀಡುವಂತೆ ಕೋರಿದೆ. ಇದಕ್ಕೆ‌ ಸೋನಿಯಾ ಗಾಂಧಿ‌ ಅವರು ಸಲಹೆ ಸಹಕಾರ ಮಾರ್ಗದರ್ಶನ ನೀಡಿದರು ಎಂದು ನೆನೆದು ಅಂದು ರಾಜ್ಯದಲ್ಲಿದ್ದ ನಮ್ಮ ಸಿದ್ದರಾಮಯ್ಯ ನವರ ಸರ್ಕಾರ ಜಾರಿಗೆ ತರಲು ಸಮಿತಿ ರಚನೆ ಮಾಡಿದರು. ಆರ್ಟಿಕಲ್ 371(J) ಜಾರಿಯಾದ ನಂತರ ಮೊದಲ ಬಾರಿಗೆ ವಾರ್ಷಿಕ ರೂ‌1500 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ ಅದರಂತೆ ಅನುದಾನ ನೀಡಿದೆವು ಆದರೆ ಮುಂದೆ ಬಂದ ಸರ್ಕಾರ ಅದರಂತೆ ನಡೆದುಕೊಳ್ಳಲಿಲ್ಲ ಎಂದರು.

ಇದನ್ನೂ ಓದಿ:ಹಿಮಾಚಲ: ಸುಖವಿಂದರ್ ಸಿಂಗ್ ಸುಖುಗೆ ಸಿಎಂ ಪಟ್ಟ ; ಪ್ರತಿಭಾ ಪರ ಘೋಷಣೆಗಳು

Advertisement

ಕಕ ಭಾಗದಲ್ಲಿ 50000 ಹುದ್ದೆಗಳು ‌ಖಾಲಿ ‌ಇವೆ. ಸರ್ಕಾರ ಈ‌ ಹುದ್ದೆಗಳನ್ನು‌ ಯಾಕೆ ತುಂಬುತ್ತಿಲ್ಲ? ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಕೇವಲ ಕಕಭಾಗ ಮಾತ್ರವಲ್ಲದೇ ಇಡೀ ರಾಜ್ಯದ ಖಾಲಿ‌ಹುದ್ದೇಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.

ನಾನು ಗುಜರಾತ್ ಗೆ ಹೋದಾಗ ಮೋದಿ 71000 ಸರ್ಕಾರದ ಹುದ್ದೆ ತುಂಬಿದ ಆದೇಶದ ಪ್ರತಿಯನ್ನು ಕೊಟ್ಟ ಸುದ್ದಿ ಟಿವಿಯಲ್ಲಿ ನೋಡಿದೆ. ಸರ್ಕಾರದ ಅಧಿಕಾರಿಗಳು ಮಾಡುವ ಕೆಲಸವನ್ನು ಪ್ರಧಾನಿ ಮಾಡಿ ಪ್ರಚಾರ ತೆಗೆದುಕೊಂಡರು. ಆದರೆ ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬುತ್ತಿಲ್ಲ. ಈ ಹುದ್ದೆ ಭರ್ತಿಯಾದರೆ‌ ಎಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ. ಅಂದಾಜು ಎರಡು ಕೋಟಿ‌ ಜನರಿಗೆ ಅನ್ನ ಸಿಗಲಿದೆ. ಆ ಕೆಲಸ ಮಾಡುವ ಬದಲು ಬರೀ ಮಾತುಗಳೇ ಹೇಳುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ‌ಹುದ್ದೆ ಗಳು ಎಲ್ಲಿ ಹೋದವು. ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಈ ಭಾಗದ ಅಭಿವೃದ್ದಿಗೆ ಪ್ರತಿವರ್ಷ 5000 ಕೋಟಿ ಅನುದಾನ ನೀಡುವುದರ ಜೊತೆಗೆ ಹೊಸ ಕೈಗಾರಿಕ ನೀತಿ ಜಾರಿಗೆ ತರುವ ಮೂಲಕ ಒಂದು ಲಕ್ಷ ಹುದ್ದೆ ಸೃಷ್ಟಿಸುತ್ತೇವೆ. ಗೋದಾವರಿ ಹಾಗೂ ಕೃಷ್ಣ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಭಾಗಕ್ಕೆ ಎಜುಕೇಷನ್ ಜೋನ್ ಮಾಡಿ‌ ಬಾಲಕಿಯರಿಗೆ ಪ್ರತ್ಯೇಕ ಡಿಗ್ರಿ ಕಾಲೇಜು ಸ್ಥಾಪನೆ ಪ್ರತಿ ಜಿಲ್ಲೆ ಮಾಡಲಿದ್ದೇವೆ. ಐದು ವರ್ಷದಲ್ಲಿ ಈ‌ ಭಾಗದ‌ ಜನರಿಗೆ ಮನೆ ಕಟ್ಟಿಕೊಡಲಿದ್ದೇವೆ. ನಾವು ಭರವಸೆ ನೀಡಿದಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಇದು ನಮ್ಮ ಬದ್ಧತೆ. ನಾವು ನಮ್ಮನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೇಂದ್ರ ಬಿಜೆಪಿ ಈ ರಾಜ್ಯಕ್ಕೆ ಯಾವುದೇ ಪ್ರಮುಖ ಯೋಜನೆ ತಂದಿಲ್ಲ. ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಆದರೂ ಕೆಲವರು ಮೋದಿ ಹೆಸರು ಹೇಳುತ್ತಿದ್ದಾರೆ. ‌ಗುಜರಾತ್ ನಂತರ ಈಗ ರಾಜ್ಯಕ್ಕೆ‌ಬಿಜೆಪಿಯ ಮೋದಿ- ಶಾ ಬರುತ್ತಿದ್ದಾರೆ. ನಾನು ನಮ್ಮ ಪಕ್ಷದ‌ ನಾಯಕರಿಗೆ ಹೇಳುವುದಿಷ್ಟೆ ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ. ಯಾರು‌ ಸಿಎಂ ಆಗುತ್ತಾರೆ ಯಾರು ಮಂತ್ರಿ ಆಗುತ್ತಾರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ನಾವೇ ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಾಗಾಗಿ, ನೀವೆಲ್ಲ ಒಂದಾಗಿ ಕೆಲಸ ಮಾಡಿ. ಹಿಮಾಚಲದಲ್ಲಿ ಹತ್ತಂಶದ ಕಾರ್ಯಕ್ರಮ ಕೊಟ್ಟಿದ್ದರಿಂದ ಗೆದ್ದಿದ್ದೇವೆ. ನಾಳೆ ನೂತನ ಸಿಎಂ ಮಾಡಲಿದ್ದೇವೆ. ಹಾಗಾಗಿ ಇಲ್ಲಿಯೂ ಕೂಡಾ ಅದೇ ತರ ಮಾಡಬೇಕು ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಾನು ಯಾರ ಪರ ಇಲ್ಲ ನನಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next