Advertisement

ಪಡೆಯುವ ವೇತನಕ್ಕೆ ಸರಿಯಾಗಿ ಕೆಲಸ ಮಾಡಿ: ಸಣ್ಣಕ್ಕಿ 

05:44 PM Aug 01, 2018 | Team Udayavani |

ಮಹಾಲಿಂಗಪುರ: ಸರಕಾರಿ ಸಂಬಳ ಪಡೆಯುತ್ತಿರುವುದಕ್ಕಾದರೂ ನಿಷ್ಠೆಯಿಂದ ಸಾರ್ವಜನಿಕರ ಕೆಲಸ ಮಾಡಿ ಎಂದು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಪುರಸಭೆ ಸದಸ್ಯ ಪ್ರಹ್ಲಾದ ಸಣ್ಣಕ್ಕಿ ತರಾಟೆಗೆ ತೆಗೆದುಕೊಂಡರು. ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ರಾಯರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾದ ಆರೋಗ್ಯ ಅಭಿಯಂತರರ ವಿರುದ್ಧ ಚರ್ಚೆಗಿಳಿದ ಅವರು ಸರ್ಕಾರ ನಿಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡುತ್ತೀದೆ ತಾನೆ? ಆದರೂ ನೀವೇಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸದಸ್ಯರು ಹೇಳಿದ ಮಾತನ್ನು  ದಿಕ್ಕರಿಸುವ ನೀವು ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಹೇಗೆ ಸಾಧ್ಯ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

Advertisement

ಸದಸ್ಯ ಜಾವೇದ ಬಾಗವಾನ ಮಾತನಾಡಿ, ಸ್ವಚ್ಛ ಭಾರತ ಅಭಿಯಾನ ಯೋಜನೆಯಲ್ಲಿ ಸರ್ಕಾರಿ ಶಾಲೆಗಳಿಗೆ ಶೌಚಾಲಯ ಕಟ್ಟಲು ಪರವಾನಗಿ ಇದೆಯೇ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಹೌದು ಇದೇ ಈಗಾಗಲೇ ನಾವು ಕೆಲವು ಶಾಲೆಗಳ ಪಟ್ಟಿ ಮಾಡಿ ಅಲ್ಲಿ ಶೌಚಾಲಯ ಕಟ್ಟಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಸದಸ್ಯ ಶಿವಲಿಂಗ ಘಂಟಿ ಮಾತನಾಡಿ, ಮುಖ್ಯಾಧಿಕಾರಿಗಳ ವಾಹನ ಬಾಡಿಗೆ ತಿಂಗಳಿಗೆ 30 ಸಾವಿರ ಇದೆ. ಕಾರಣ ಪ್ರತಿ 2 ವರ್ಷಕ್ಕೊಮ್ಮೆ ವಾಹನ ಬದಲಾವಣೆ ಮಾಡಬೇಕು. ಆದರೆ ನೀವು ಅದೇ ಹಳೆಯ ವಾಹನಕ್ಕೆ ಇಷ್ಟು ಬಾಡಿಗೆ ಏಕೆ ಕೊಡುತ್ತೀದ್ದೀರಿ? ಕೂಡಲೇ ಹೊಸ ವಾಹನವನ್ನು ತರಲು ಮರು ಟೆಂಡರ್‌ ಕರೆಯಿರಿ ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ಪಟ್ಟಣದಲ್ಲಿ ವಿದ್ಯುತ್‌ ಬಳಕೆ ಸರಿಯಾಗಿ ಆಗುತ್ತಿಲ್ಲ. ಮುಂಜಾನೆ 6 ಗಂಟೆಗೆ ಪಟ್ಟಣದಲ್ಲಿನ ಎಲ್ಲ ಸಾರ್ವಜನಿಕ ವಿದ್ಯುತ್‌ ದೀಪಗಳನ್ನು ಬಂದ್‌ ಮಾಡುವ ಕೆಲಸವಾಗಬೇಕು. ಸಾರ್ವಜನಿಕರು ಕಟ್ಟಡ ಪರವಾನಗಿ ಸಲುವಾಗಿ ನಿತ್ಯ ಪುರಸಭೆಗೆ ಅಲೆದಾಡಿಸದಂತೆ, ತಕ್ಷಣ ಪರೀಶಿಲನೆ ಮಾಡಿ ಪರವಾನಗಿ ಮತ್ತು ಉತಾರ ಕೊಡುವ ವ್ಯವಸ್ಥೆ ಮಾಡಬೇಕು ಎಂದರು.

ಸದಸ್ಯ ಸಂಗಪ್ಪ ಹಲ್ಲಿ ಮಾತನಾಡಿ, ಮುಂದಿನ ತಿಂಗಳು ಜಾತ್ರೆ ಒಳಗಾಗಿ ಪಟ್ಟಣದ ಎಲ್ಲ ವಾರ್ಡ್‌ ಹಾಗೂ ಮುಖ್ಯ ರಸ್ತೆಗಳ ವಿದ್ಯುತ್‌ ಕಂಬಗಳಿಗೆ ದ್ವೀಪಗಳ ಅಳವಡಿಕೆ ಮತ್ತು ಪ್ರಮುಖ ರಸ್ತೆ ದುರಸ್ತಿ ಬಗ್ಗೆ ಮುಂಜಾಗ್ರತೆ ವಹಿಸಿರಿ ಎಂದರು. ಪುರಸಭೆಗೆ ಅವಶ್ಯಕವಿರುವ ಸಾಮಗ್ರಿಗಳ ಖರೀದಿಗೆ ಬಂದ ದರಗಳಿಗೆ ಅನುಮೋದನೆ, ಪುರಸಭೆ ಒಡೆತನದಲ್ಲಿ ಖಾಲಿ ಉಳಿದ ಅಂಗಡಿಗಳನ್ನು ಬಹಿರಂಗ ಹರಾಜಿನಲ್ಲಿ ಹೆಚ್ಚಿಗೆ ಬೇಡಿದವರ ದರ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವಣೆ ಕಳಿಸುವುದು, ವಿವಿಧ ವಾರ್ಡ್‌ಗಳಲ್ಲಿ ಪುರಸಭೆ ಸಾಮಾನ್ಯ ನಿಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸೇರಿದಂತೆ ಪ್ರಮುಖ ವಿಷಯಗಳಿಗೆ ಸರ್ವಾನುಮತದಿಂದ ಠರಾವು ಪಾಸ್‌ ಮಾಡಲಾಯಿತು.

Advertisement

ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಚೇರಮನ್‌ ಹೊಳೆಪ್ಪ ಬಾಡಗಿ, ಸದಸ್ಯರಾದ ಯಲ್ಲನಗೌಡ ಪಾಟೀಲ, ಮಂಜು ಬಕರೆ, ಸಿದ್ದು ಆಲಬಾಳ, ಭೀಮಶಿ ಗೌಂಡಿ, ಶ್ರೀಮಂತ ಹಳ್ಳಿ, ಸಂತೋಷ ಹುದ್ದಾರ, ನಜೀರ ಅತ್ತಾರ, ಪಾರ್ವತಿ ಪಟೇಲ್‌, ಸವಿತಾ ರಾಯರ, ಶೋಭಾ ಪಾಟೀಲ, ಹನಮವ್ವ ಹಂದಿಗುಂದ, ಜಾನವ್ವ ಬುರುಡ, ಆರ್‌. ಎಸ್‌.ಚವ್ಹಾಣ, ಡಿ.ಬಿ ಪಠಾಣ, ರಾಜು ಹೂಗಾರ, ಇರ್ಫಾನ್‌ ಜಾರೆ, ಸಿಬ್ಬಂದಿ ವಿ.ಜಿ.ಕುಲಕರ್ಣಿ, ಪಿ.ಕೆ. ಬಂಗೆನ್ನವರ, ಬಿ.ವೈ. ಮರ್ದಿ, ರಾಜೇಶ್ವರಿ ಸೋರಗಾಂವಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next