ದಾವಣಗೆರೆ: ವೃತ್ತಿ ಜೀವನದಲ್ಲಿ ಸೌಜನ್ಯ, ಸಜ್ಜನಿಕೆ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಪ್ರತಿಯೊಬ್ಬರೂ ಸಮಾಜಕ್ಕೆ ಮಾದರಿ ಪೊಲೀಸ್ ಆಗಬೇಕು ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ ಆಶಯ ವ್ಯಕ್ತಪಡಿಸಿದರು.
ಗುರುವಾರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ದಾವಣಗೆರೆ ಜಿಲ್ಲೆಯ 7ನೇ, ಶಿವಮೊಗ್ಗ ಜಿಲ್ಲೆಯ 13ನೇ ಸಶಸ್ತ್ರ ಮೀಸಲು ಪಡೆಯ ಪ್ರಶಿಕ್ಷಣಾರ್ಥಿಗಳ ನಿಗರ್ಮನ ಪಥಸಂಚಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾವಣಗೆರೆ ತರಬೇತಿ ಶಾಲೆಯಲ್ಲಿ 8 ತಿಂಗಳ ಕಾಲ ಕಲಿತ ಅನುಭವವನ್ನು ವೃತ್ತಿ ಜೀವನದಲ್ಲೂ ಪಾಲಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಬೇಕು ಎಂದರು.
ನಾಗರಿಕ ಸಮಾಜದ ಬೆಳವಣಿಗೆಯಲ್ಲಿ ಆಂತರಿಕ ಭದ್ರತೆ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮಹಾನ್ ಪಾತ್ರ ವಹಿಸುತ್ತದೆ. ಅಂತಹ ಇಲಾಖೆಯಲ್ಲಿ ಅತಿ ಸಮರ್ಥವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯಲ್ಲಿ ಬಲವಾದ ಚಾರಿತ್ರ ನಿರ್ಮಾಣ ಮಾಡಬೇಕಾಗುತ್ತದೆ. ಪಥಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳು ನೀಡಿರುವ ಕವಾಯತ್ ಪ್ರದರ್ಶನ ಗಮನಿಸಿದಲ್ಲಿ ಉತ್ತಮ ಮಟ್ಟದ ತರಬೇತಿ ನೀಡಲಾಗಿದೆ ಎಂಬುದು ಗೊತ್ತಾಗುತ್ತದೆ. ತರಬೇತಿ ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಪೊಲೀಸರಲ್ಲಿ ಬಲವಾದ ಚಾರಿತ್ರ ನಿರ್ಮಾಣ ಆಗಬೇಕಾದಲ್ಲಿ ಪ್ರಾಮಾಣಿಕತೆ, ಸಜ್ಜನಿಕೆ, ಸೌಜನ್ಯತೆಯ ಬೆಳೆಸಿಕೊಳ್ಳುವ ಜತೆಗೆ ನಮ್ಮ ಮೌಲ್ಯಗಳ ಬಗ್ಗೆ ನಂಬಿಕೆ ಹೊಂದಿರಬೇಕು. ನೈತಿಕ ಸಾಹಸ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ಈ ಎಲ್ಲ ಅಂಶಗಳೊಡಗೂಡಿ ಸಮಾಜ ಸದಾ ಪೊಲೀಸ್ ಇಲಾಖೆಯನ್ನ ನಂಬುವಂತೆ ಕೆಲಸ ಮಾಡುವ ಮುಖೇನ ನಾವು ಸಹ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ದಾವಣಗೆರೆ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯೆ ಯಶೋದಾ ಎಸ್. ವಂಟಿಗೋಡಿ ಮಾತನಾಡಿ, ದಾವಣಗೆರೆ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ದಾವಣಗೆರೆ ಜಿಲ್ಲೆಯ 103, ಶಿವಮೊಗ್ಗ ಜಿಲ್ಲೆಯ 45 ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ, ಹೊರಾಂಗಣ, ಕಾನೂನು ಮಾಹಿತಿಯ ತರಬೇತಿ ನೀಡಲಾಗಿದೆ. ಇಲಾಖೆಯಿಂದ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರದ ಮೇಲ್ಛಾವಣಿ ಮತ್ತು ಭೋಜನಾಲಯಕ್ಕೆ 37.25 ಲಕ್ಷ ರೂ. ನೀಡಲಾಗಿದೆ ಎಂದರು.
ಶಿವಮೊಗ್ಗ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಎಂ. ಮುತ್ತುರಾಜ್ ಮಾತನಾಡಿ, ದಾವಣಗೆರೆಯ ತರಬೇತಿ ಕೇಂದ್ರದಲ್ಲಿ ಶಿವಮೊಗ್ಗ ಜಿಲ್ಲೆಯ 45 ಮಂದಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರಿದ್ದಾರೆ ಎಂದರು. ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸ್ವಾಗತಿಸಿದರು. ಒಳಾಂಗಣ, ಹೊರಾಂಗಣ, ರೈಫಲ್ ಶೂಟಿಂಗ್ ಒಳಗೊಂಡಂತೆ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ದಾವಣಗೆರೆ ಜಿಲ್ಲೆಯ ಟಿ.ಎಂ. ಸಂತೋಷ್‌ಕುಮಾರ್ ಸರ್ವೋತ್ತಮ ಪ್ರಶಿಕ್ಷಣಾರ್ಥಿ, ಜಿ. ವೆಂಕಟೇಶ್‌ಮೂರ್ತಿಗೆ ಡಿಜಿ ಟ್ರೋಫಿ, ಶಿವಮೊಗ್ಗದ ಪ್ರವೀಣ್ ಕೆಂಪಣ್ಣ ಹೆಬ್ಟಾಳ್ ಗೆ ಸರ್ವೋತ್ತಮ ಪ್ರಶಿಕ್ಷಣಾರ್ಥಿ, ಎಸ್. ನಿಂಗರಾಜ್ ಗೆ ಡಿಜಿ ಟ್ರೋಫಿ ಪ್ರದಾನ ಮಾಡಲಾಯಿತು. ಪ್ರಶಿಕ್ಷಣಾರ್ಥಿಗಳು ಅತ್ಯಾಕರ್ಷಕ ಪಥಸಂಚಲನ ನಡೆಸಿದರು.