Advertisement

ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಆಗಲಿ

10:42 PM Sep 12, 2021 | Team Udayavani |

ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿದ್ದು,  ರಾಜ್ಯದ ಜನರ ಸಮಸ್ಯೆಗಳು ಹಾಗೂ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಆಗಬೇಕಾಗಿದೆ.

Advertisement

ವಿಧಾನಮಂಡಲ ಅಧಿವೇಶನ ಗದ್ದಲ, ಕೋಲಾಹಲ, ಧರಣಿ, ಪ್ರತಿಭಟನೆಗಳಿಗೆ ಸೀಮಿತವಾಗದೆ ಕಲಾಪ ಮುಂದೂಡಿಕೆಯಂತಹ ಸಂದರ್ಭ ಸೃಷ್ಟಿಯಾಗದಂತೆ ಮೌಲ್ಯಯುತ ಹಾಗೂ ಮಹತ್ವದ ವಿಚಾರಗಳ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆಯಾಗಬೇಕು ಎಂಬುದು ಜನರ ಆಶಾಭಾವನೆ. ಅಧಿವೇಶನ ಸುಸೂತ್ರ ಹಾಗೂ ಸುಗಮವಾಗಿ ನಡೆಯಲು ಆಡಳಿತ ಹಾಗೂ ವಿಪಕ್ಷಗಳ ಸಮಾನ ಹೊಣೆಗಾರಿಕೆಯೂ ಇದೆ. ಪ್ರತಿಷ್ಠೆ, ಪ್ರಚಾರ, ರಾಜಕೀಯ ಬದಿಗಿಟ್ಟು ಜನಪರ ಸಮಸ್ಯೆಗಳಿಗೆ ಅಧಿವೇಶನ ಧ್ವನಿಯಾಗಬೇಕಾಗಿದೆ.

ಕೊರೊನಾ ಎರಡನೇ ಅಲೆ ಸಂಕಷ್ಟ ಮರೆಯಾಗುತ್ತಿರುವ ಬೆನ್ನಲ್ಲೇ ಮೂರನೇ ಅಲೆ ಆತಂಕವೂ ಇರುವುದರಿಂದ ಅದನ್ನು ಎದುರಿಸಲು ಸರಕಾರ ಸಜ್ಜಾಗಬೇಕಾಗಿದೆ. ಮಸೂದೆಗಳು ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಉಭಯ ಸದನಗಳಲ್ಲಿ ಉಪಯುಕ್ತ ಚರ್ಚೆ ನಡೆಯಬೇಕಾಗಿದೆ. ಈ ಅಧಿವೇಶನದಲ್ಲಿ ಕೊನೆಗಳಿಗೆಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಿಟ್ಟ ನಿಲುವು ಕೈಗೊಂಡಿದ್ದು ಸ್ವಾಗತಾರ್ಹ. ಜತೆಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜ ರಾಗಲು ಸೂಚನೆ ನೀಡಿರುವುದು, ಅಧಿವೇಶನದ ಸಮಯದಲ್ಲಿ ಸಚಿವರು ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದಂತೆ ನಿರ್ದೇಶನ ನೀಡಿರುವುದು, ಅನಿವಾರ್ಯ ಕಾರಣ ಇದ್ದರೆ ಮಾತ್ರ ಅವಕಾಶ, ಆದರೆ ನೆಪ ಹೇಳಿ ಗೈರು ಹಾಜರಾಗಲು ಅವಕಾಶ ಇಲ್ಲ. ಶಾಸಕರಿಗೂ ಇದು ಅನ್ವಯಿ ಸುತ್ತದೆ ಎಂದು ನಿಷ್ಠುರವಾಗಿಯೇ ಹೇಳಿರುವುದು, ಅಧಿಕಾರಿಗಳೂ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತರಗಳನ್ನು ಕಾಲ ಕಾಲಕ್ಕೆ ನೀಡಬೇಕಿದೆ ಎಂಬೆಲ್ಲ ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಚೊಚ್ಚಲ ಅಧಿವೇಶನ ಸಹ. ರಾಜಕೀಯ ಹಾಗೂ ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿರುವ ಇವರಿಗೆ ಅಧಿವೇಶನ ಸವಾಲು ಆಗಿದೆ. ಪ್ರಸಕ್ತ ಸಂದರ್ಭದಲ್ಲಿ ಒಂದೆಡೆ ಕೊರೊನಾ ಸಂಕಷ್ಟದಿಂದ ಆರ್ಥಿಕತೆ  ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ, ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಸೇರಿ ಹಲವು ಸಮಸ್ಯೆಗಳೂ ಇವೆ. ಇದರ ನಡುವೆಯೂ ಮುಖ್ಯಮಂತ್ರಿಯವರು ಆಡಳಿತ ಯಂತ್ರ ಚುರುಕುಗೊಳಿಸಲು ಹಲವು ಬಿಗಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

ಈ ಅಧಿವೇಶಆನದಲ್ಲಿ ಉತ್ತಮವಾಗಿ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕರೊಬ್ಬರಿಗೆ ಬೆಸ್ಟ್‌ ಶಾಸಕ ಎಂಬ ಪ್ರಶಸ್ತಿ ನೀಡಲು ಸ್ಪೀಕರ್‌ ಮುಂದಾಗಿದ್ದಾರೆ. ಹೀಗಾಗಿ ಯಾವ ಶಾಸಕರು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈ ಪ್ರಶಸ್ತಿ ಪಡೆಯುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ವಿಧಾನ ಮಂಡಲ ಅಧಿವೇಶನದ ಬಗ್ಗೆ ಜನತೆಯೂ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ರೈತರು, ವಿದ್ಯಾರ್ಥಿ ಸಮುದಾಯ, ಕಾರ್ಮಿಕ ವರ್ಗ ಸೇರಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾವಗೊಂಡು ಪರಿಹಾರ ದೊರಕುವ ಆಶಾಭಾವನೆ ಹೊಂದಿದ್ದಾರೆ. ಹೀಗಾಗಿ ಅಧಿವೇಶನದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಆಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next