ಚಿಂಚೋಳಿ: ತಾಲೂಕಿನ ವನ್ಯಜೀವಿ ಧಾಮ ಮೀಸಲು ಅರಣ್ಯಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಮೀನಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಜಿಪಂ ಸಿಇಒ ಅನಿರುದ್ಧ ಶ್ರವಣ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಮಾತನಾಡಿದ ಅನಿರುದ್ಧ ಶ್ರವಣ, ಪ್ರತಿಯೊಬ್ಬರು ಗ್ರಾಪಂನಿಂದ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು. ನಿಮ್ಮ ಗ್ರಾಮಕ್ಕೆ ಬೇಕಾಗುವ ಕೆಲಸಗಳ ಬಗ್ಗೆ ಪಿಡಿಒ ಮತ್ತು ಕಾರ್ಯದರ್ಶಿಗೆ ಮಾಹಿತಿ ನೀಡಬೇಕು. ನಿಮ್ಮ ಗ್ರಾಮದ ಪ್ರತಿಯೊಂದು ಕುಟುಂಬಕ್ಕೆ 100 ದಿನಗಳ ವರೆಗೆ ಕೂಲಿ ಕೆಲಸ ನೀಡಲಾಗುವುದು.
ಯಾರು ತಮ್ಮ ತಾಂಡಾ ಮತ್ತು ಗ್ರಾಮ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋಗಬಾರದು. ಅಲ್ಲದೇ ಪ್ರತಿಯೊಬ್ಬರು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ಹೇಳಿದರು. ಕುಂಚಾವರಂ ಗ್ರಾಪಂಗೆ ಪ್ರಸಕ್ತ ಸಾಲಿನಲ್ಲಿ 1.10 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಇದ್ದರೂ ಜನವರಿ ಅಂತ್ಯಕ್ಕೆ ಕೇವಲ 18 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಪಿಡಿಒ ತುಕ್ಕಪ್ಪ ವಿವರಿಸಿದರು.
ಕುಂಚಾವರಂ ಗಡಿಭಾಗದಲ್ಲಿರುವ ಮೊಗದಂಪುರ, ಶಿವರೆಡ್ಡಿಪಳ್ಳಿ, ಪೋಚಾವರಂ, ಲಿಂಗಾನಗರ, ಲಚಮಾಸಾಗರ, ಶಾದೀಪುರ, ಪೆದ್ದಿ ತಾಂಡಾ, ಧರ್ಮಾಸಾಗರ, ವೆಂಕಟಪುರ, ಬೋನಸಪುರ, ಸಂಗಾಪುರ ತಾಂಡಾ, ಅಂತಾವರಂ ಹಾಗೂ ಶಾದೀಪುರ ಗ್ರಾಪಂ ವ್ಯಾಪ್ತಿಯ ತಾಂಡಾಗಳ ಜನರು ಬಹುತೇಕ ಬೇಸಿಗೆ ಮತ್ತು ಮಳೆಗಾಲದಲ್ಲಿ ನಗರ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ ಎಂದು ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ ಅವರು ಸಿಇಒ ಅವರ ಗಮನಕ್ಕೆ ತಂದರು.
ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ತಹಶೀಲ್ದಾರ ಪ್ರಕಾಶ ಕುದುರೆ, ಉದ್ಯೋಗ ಖಾತ್ರಿ ಯೋಜನೆ ನೋಡಲ್ ಅಧಿಕಾರಿ ಸಂತೋಷಕುಮಾರ ಯಾಚೆ, ತಾಪಂ ಸದಸ್ಯ ಚಿರಂಜೀವಿ, ಶರಣಬಸಪ್ಪ ಮಮಶೆಟ್ಟಿ ಇದ್ದರು.