Advertisement

ಲಿಂಗಸುಗೂರು ಅಭಿವೃದ್ಧಿಗೆ ಪ್ರಯತ್ನ

06:28 PM Aug 31, 2020 | Suhan S |

ಲಿಂಗಸುಗೂರು: ಲಿಂಗಸುಗೂರು ನನ್ನ ಜನ್ಮಭೂಮಿ, ರಾಯಚೂರು ಕರ್ಮಭೂಮಿಯಾಗಿದೆ. ತಾಲೂಕಿನ ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಿ ಕೊಡಿ. ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಯೋಜನೆಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಹೇಳಿದರು.

Advertisement

ಪಟ್ಟಣದ ಸಾಯಿಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 2008ರಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿದ್ದೆ. ಅಂದು ಮಾನಪ್ಪ ವಜ್ಜಲ್‌ರನ್ನು ಗೆಲ್ಲಿಸಿದ್ದು ನನಗೆ ತೃಪ್ತಿ ತಂದಿದೆ. ದಿನದ 24 ಗಂಟೆಯೂ ಪಕ್ಷಕ್ಕಾಗಿ ದುಡಿದ ಫಲವೇ ಇಂದು ಪಕ್ಷ ನನ್ನನ್ನು ಗುರುತಿಸಿ ರಾಜ್ಯಸಭಾ ಸದಸ್ಯ ಸ್ಥಾನ ನೀಡಿದೆ. ಕೆಲವರು ನನ್ನ ಮುಂದೆ ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತೆ ಎಂದು ಅಪಹಾಸ್ಯ ಮಾಡಿದ್ದರು. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದರು.

ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಮಾತನಾಡಿ, ಲಿಂಗಸುಗೂರು ತಾಲೂಕು ಈ ಬಾರಿ ಇಬ್ಬರು ಸಂಸದರನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿನ  ರಾಜಕಾರಣಿಗಳು ಬೇರೆ ಬೇರೆ ಜಿಲ್ಲೆಗಳಿಗೆ ಸಂಸದ, ಶಾಸಕರಾಗಿದ್ದಾರೆ. ಹೀಗಾಗಿ ಲಿಂಗಸುಗೂರು ತಾಲೂಕನ್ನು ರಾಜಕೀಯ ಕಾರ್ಖಾನೆ ಎಂದು ಕರೆಯಲಾಗುತ್ತಿದೆ. ಆದರೆ ಇದಕ್ಕೆ ಅಪವಾದ ಎಂಬುವಂತೆ ಅನ್ಯ ಜಿಲ್ಲೆಯವರು ಇಲ್ಲಿಗೆ ಬಂದು ಈಗ ಶಾಸಕರಾಗಿರುವುದು ತಾಲೂಕಿನ ದುರ್ದೈವದ ಸಂಗತಿಯಾಗಿದೆ. ಈಗಿನ ಶಾಸಕರು ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ನಿಷ್ಕ್ರಿಯರಾಗಿದ್ದಾರೆ ಎಂದು ಅವರು ಆರೋಪಿಸಿದರು. ಅಶೋಕ ಗಸ್ತಿಯವರು ಲಿಂಗಸುಗೂರಿನಲ್ಲಿ ಹುಟ್ಟಿ ಬೆಳೆದವರು. ಪಕ್ಷದ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಅವರನ್ನು ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಗುರುತಿಸಿ ರಾಜ್ಯಸಭಾ ಸದಸ್ಯ ಸ್ಥಾನ ನೀಡಿದ್ದಾರೆ. ಇದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದಂತಾಗಿದೆ ಎಂದರು.

ಬಿಜೆಪಿ ಮುಖಂಡರಾದ ಡಾ| ಶಿವಬಸಪ್ಪ, ಗಿರಿಮಲ್ಲನಗೌಡ ಕರಡಕಲ್‌, ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಬಾಬಣ್ಣ ಆನ್ವರಿ, ಜಗನ್ನಾಥ ಕುಲಕರ್ಣಿ, ಗೋವಿಂದ ನಾಯಕ, ಹುಲ್ಲೇಶ ಸಾಹುಕಾರ, ಸಿದ್ದಯ್ಯ ಗುರುವಿನ, ಪ್ರಭುಸ್ವಾಮಿ, ಜಯಶ್ರೀ ಸಕ್ರಿ, ಬಸಮ್ಮ ಯಾದವ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next