ಗುರುಮಠಕಲ್: ತಾಂಡಾದ ಜನರು ಕಷ್ಟಪಟ್ಟು ದುಡಿಯುತ್ತಾರೆ. ಅವರ ಶ್ರಮದ ಫಲವಾಗಿ ಇಂದು ತಾಂಡಗಳು ಹಿಂದಿನ ತಾಂಡಗಳಾಗಿ ಉಳಿದಿಲ್ಲ. ಅವು ಅಭಿವೃದ್ಧಿ ಹೊಂದಿವೆ. ತಾಂಡದಲ್ಲಿನ ಶಾಲಾ ಕಟ್ಟದ, ಶೌಚಾಲಯ, ರಸ್ತೆ ಸ್ವಚ್ಛತೆ, ದೊಡ್ಡ ದೊಡ್ಡ ಮನೆಗಳು ಎದ್ದು ನಿಂತಿರುವುದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಸಮೀಪದ ಬುರ್ಜು ತಾಂಡಾದಲ್ಲಿ ಆಯೋಜಿಸಿದ್ದ ನಬಾರ್ಡ್ ಯೋಜನೆಯ 1.23 ಕೋಟಿ ರೂ. ರಸ್ತೆ ಸುಧಾರಣೆ ಕಾಮಗಾರಿಯ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ತಾಂಡಗಳಲ್ಲಿ ಶಿಕ್ಷಣ ಪ್ರಮಾಣ ಹೆಚ್ಚಾಗಿರುವುದರಿಂದ ಅಭಿವೃದ್ಧಿ ಕೂಡ ಹೆಚ್ಚಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಭೇದ ಮರೆತು ಕೈ ಜೋಡಿಸಬೇಕು. ಗ್ರಾಪಂ ಸದಸ್ಯರು ಹಾಗೂ ಮತದಾರರು ಚುನಾವಣೆ ಇದ್ದಾಗ ಮಾತ್ರ ಪಕ್ಷಕ್ಕಾಗಿ ಶ್ರದ್ಧೆಯಿಂದ ದುಡಿಯಬೇಕು ಎಂದು ಕಿವಿ ಮಾತು ಹೇಳಿದರು.
ಮತಕ್ಷೇತ್ರದಲ್ಲಿ ಹುಟ್ಟಿದ ನಾನು ಕ್ಷೇತ್ರದ ಜನರ ಋಣ ತೀರಿಸುವೆ. ಸುಮಾರು 175 ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದೇನೆ. ಕೆಲ ಕಾಮಗಾರಿ ಅಭಿವೃದ್ಧಿಯಲ್ಲಿದ್ದರೆ ಇನ್ನು ಟೆಂಡರ್ ಹಂತದಲ್ಲಿವೆ. ಬಹುತೇಕ ಎಲ್ಲ ಕಾಮಗಾರಿಗಳು ಮಾರ್ಚ್ 31ರೊಳಗಾಗಿ ಮುಗಿಯಲಿವೆ ಎಂದು ತಿಳಿಸಿದರು. ಚಿದಾನಂದಪ್ಪ ಕಾಳಬೆಳಗುಂದಿ, ತಾಲೂಕು ಪಂಚಾಯಿತಿ ಸದಸ್ಯ ತಿಪ್ಪಣ್ಣ ಗುಟ್ಟಲ, ಶಾಂತರಾಜ ಯದ್ಲಾಪುರ, ಬಸ್ಸು ನಾಯಕ, ಲಿಂಗಾರೆಡ್ಡಿ, ಶರಣು ನಾಯಕ, ಎಇಇ ನಾರಪ್ಪ, ಜೆಇ ಸಿದ್ದಣಗೌಡ ಇದ್ದರು.