Advertisement

ಕೆಲಸ, ವಿದ್ಯುತ್‌ ತಂತಿ ತೆರವಿಗೆ ಮನವಿ: ಕ್ರಮದ ಭರವಸೆ

11:49 AM Feb 19, 2019 | |

ದಾವಣಗೆರೆ: ವಿದ್ಯುತ್‌ ತಂತಿ ತೆರವು, ವಿಕಲಚೇತನ ಮಗಳಿಗೆ ಕೆಲಸ, ಜಮೀನಿನಲ್ಲಿರುವ ಮರಳು ಬಳಕೆಗೆ ಅನುಮತಿ ಮನವಿ ಸೇರಿ ಸೋಮವಾರ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲು ಸಲ್ಲಿಕೆಯಾಗಿವೆ.

Advertisement

ಲೋಕಿಕೆರೆ ಗ್ರಾಮದ ಎಂ.ಕೆ ಅಂಜಿನಪ್ಪ ಎಂಬುವರು ತತ್ಕಾಲ್‌ ಪೋಡಿಗಾಗಿ ಸಲ್ಲಿಸಿದ ಅರ್ಜಿ ಸಂಬಂಧ ಅಪರ ಜಿಲ್ಲಾಧಿಕಾರಿ, ಸಾಮಾಜಿಕ ಭದ್ರತೆ ಶಾಖೆಯ ವಿಷಯ ನಿರ್ವಾಹಕರಿಗೆ ಅರ್ಜಿ ನೀಡಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ಪಹಣಿಯಲ್ಲಿ ಜಂಟಿ ಹೆಸರು ನಮೂದಿಸುವ ಸಂಬಂಧ ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ಕಮಲಮ್ಮ ಎಂಬುವರು ಅರ್ಜಿ ಸಲ್ಲಿಸಿ, ಗ್ರಾಮದ ರಿ.ಸ.ಸಂ 86/10ರಲ್ಲಿ 3 ಎಕರೆ ಜಮೀನನ್ನು ಪಾಲು ವಿಭಾಗ ಮಾಡಿಸಲು ಹೋದಾಗ ಡಾಟಾ ಎಂಟ್ರಿಯಲ್ಲಿ ಸರ್ಕಾರಿ ಎಂದು ತೋರಿಸುತ್ತಿದೆ. ಚಾಲ್ತಿ ಪಹಣಿಯಲ್ಲಿ ಕಮಲಮ್ಮ, ಲೋಕೇಶಪ್ಪ, ಜಾನಪ್ಪ, ಜಟ್ಯಪ್ಪ, ತಿಪ್ಪಣ್ಣ ಮತ್ತು ಭರಮಪ್ಪ ಇವರ ಜಂಟಿ ಹೆಸರುಗಳು ಬರುವಂತೆ ಸರಿಪಡಿಸಿಕೊಡಿ ಎಂದು ಮನವಿ ಸಲ್ಲಿಸಿದರು.

ಆಗ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹರಿಹರ ತಾಲೂಕಿನ ತಹಶೀಲ್ದಾರ್‌ ಅವರಿಂದ ಈ ಕುರಿತು ಮಾಹಿತಿ ಪಡೆದು ನಂತರ ಸರಿಪಡಿಸಿಕೊಡಲಾಗುವುದು ಎಂದು ಪ್ರತಿಕ್ರಿಯಿಸಿದರು. ಬೂದಾಳ್‌ ರಸ್ತೆಯ ಎಸ್‌.ಪಿ.ಎಸ್‌. ನಗರದ ನಿವಾಸಿ ಟಿ. ಶ್ರೀಧರ್‌, ಎಸ್‌.ಪಿ.ಎಸ್‌ ನಗರದ
1ನೇ ಹಂತ, 3ನೇ ಕ್ರಾಸ್‌ನಲ್ಲಿ 11 ಕೆ.ವಿ ವಿದ್ಯುತ್‌ ಕಂಬದ ವೈರ್‌ಗಳು ವಾಸದ ಮನೆಗಳ ಮೇಲೆ ಹಾದುಹೋಗಿವೆ. ಅಲ್ಲಿನ ಹಳೇ ಕಂಬಗಳನ್ನು ತೆರವುಗೊಳಿಸುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಬೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆ ನಿವಾರಿಸುವಂತೆ ಸೂಚಿಸಲಾಗುವುದು ಎಂದರು.

ವಿಜಯನಗರ ಬಡಾವಣೆಯ ಗೋಪಾಲಮ್ಮ ಎಂಬುವರು, ತಮ್ಮ ವಿಕಲಚೇತನ ಮಗಳಿಗೆ ಕೆಲಸ ಕೊಡಿಸುವಂತೆ ಮನವಿ ಸಲ್ಲಿಸಿದಾಗ, ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು. 

Advertisement

ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ಕೆ. ಹನುಮಂತಪ್ಪ , ಇತರರು ಗ್ರಾಮದ ಸರ್ವೆ.ನಂ 26ರಲ್ಲಿ 4+10 ಗುಂಟೆ ಜಮೀನನ್ನು ಸರ್ಕಾರ ನಿವೇಶನ ಇಲ್ಲದವರಿಗೆ ಹಂಚಿ ಹಕ್ಕುಪತ್ರ ನೀಡಿದೆ. ಈ ಸೊತ್ತು ಮೂಲ ಗ್ರಾಮಠಾಣಾ ಹೊರಗಡೆ ಇದೆ ಎಂಬುದಾಗಿ ಮೌಖೀಕವಾಗಿ ತಿಳಿಸಿದ್ದಾರೆ.

ದೂಳೆಹೊಳೆ ಗ್ರಾಮದ ರಿ.ಸ.ನಂ 26 ರಲ್ಲಿ 4+10 ಗುಂಟೆ ಜಮೀನನ್ನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸೇರ್ಪಡೆ ಹಾಗೂ ಹಂಚಿಕೆಯಾದ ನಿವೇಶನಗಳ ಕುರಿತು ಇ-ದಾಖಲೆ ಕೊಡಿಸುವಂತೆ ಮನವಿ ಸಲ್ಲಿಸಿದರು.
 
ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು. ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ಎಚ್‌.ತಿಮ್ಮಪ್ಪ, ಅಬಕಾರಿ ನಿಯಮಾವಳಿ ಉಲ್ಲಂಘಿಸಿ ಮದ್ಯದ ಅಂಗಡಿ ತೆರೆಯಲು
ನೀಡಿರುವ ಅನುಮತಿ ರದ್ದುಪಡಿಸುವಂತೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ, ಈ ಕುರಿತು ಅಬಕಾರಿ ಇಲಾಖೆಯ ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವಂತೆ ತಿಳಿಸಲಾಗುವುದು ಎಂದರು.

ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ  ಡಿ.ಬಿ. ಮುರುಗೇಂದ್ರಪ್ಪ ಎಂಬುವರು ಮನೆ ಕಟ್ಟಿಕೊಳ್ಳಲು ತಮ್ಮ ಜಮೀನಿನಲ್ಲಿರುವ ಮರಳು ಬಳಸಿಕೊಳ್ಳಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.
 
ತಹಶೀಲ್ದಾರ್‌ಗೆ ಈ ಕುರಿತು ಮಾಹಿತಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗುವುದು ಎಂದು ಪದ್ಮ ಬಸವಂತಪ್ಪ ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಾದ ರೇಷ್ಮ ಹಾನಗಲ್‌, ಡಿಎಚ್‌ಒ ಡಾ|ತ್ರಿಪುಲಾಂಬ, ಜಿಲ್ಲಾ ವಿಕಲಚೇತನಾ ಧಿಕಾರಿ ಶಶಿಧರ್‌, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸಿದ್ದೇಶ್‌, ಇತರರು ಸಭೆಯಲ್ಲಿ ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next