Advertisement

ಕ್ಷೇತ್ರದ ಜನ ತಲೆತಗ್ಗಿಸುವ ಕೆಲಸ ಮಾಡಲಾರೆ

10:39 AM Jun 03, 2019 | Team Udayavani |

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಜನರ ನಿರೀಕ್ಷೆ ಈಡೇರಿಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಡಿ ಕೆಲಸ ಮಾಡುವುದು ನನಗೆ ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಶ್ರೀನಿವಾಸ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಿದ್ದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕೇಂದ್ರ ಸಚಿವ ಸ್ಥಾನ ನನಗೆ ಲಭಿಸಿರುವುದರಿಂದ ನಮ್ಮ ಕ್ಷೇತ್ರದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕ್ಷೇತ್ರದಲ್ಲಿ ನನ್ನ ದೈಹಿಕ ಲಭ್ಯತೆ ಕಡಿಮೆಯಾಗಬಹುದು. ಆದರೆ ಜನರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ನನ್ನ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸುತ್ತೇನೆ. ಕ್ಷೇತ್ರದ ಜನರು ತಲೆ ತಗ್ಗಿಸುವ ಕಾರ್ಯ ಮಾಡುವುದಿಲ್ಲ. ಕ್ಷೇತ್ರದ ಜನರು ಹೆಮ್ಮೆ ಪಡುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.

ಮೋದಿ ಅವರೊಂದಿಗೆ ಕೆಲಸ ಮಾಡುವುದು ಭಾಗ್ಯವೂ ಹೌದು, ಸವಾಲೂ ಹೌದು. ಪ್ರಧಾನಿ ಮೋದಿ ನನ್ನ ಮೇಲೆ ವಿಶ್ವಾಸವಿಟ್ಟು ಸಂಸದೀಯ ವ್ಯವಹಾರಗಳ ಖಾತೆ ನೀಡಿದ್ದಾರೆ. ಆ ಸ್ಥಾನಕ್ಕೆ ನಾನು ಯೋಗ್ಯವೋ ಅಲ್ಲವೋ ಗೊತ್ತಿಲ್ಲ. ನನಗೆ ಸ್ಥಾನ ಸಿಕ್ಕಿದೆ, ಉತ್ತಮ ಕಾರ್ಯ ಮಾಡುವ ಮೂಲಕ ಮಾನ ಗಳಿಸಿಕೊಳ್ಳುತ್ತೇನೆ ಎಂದು ವಿವರಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ನನಗೆ ಸಂಸತ್ತಿನಲ್ಲಿ ಧೈರ್ಯದಿಂದ ಮಾತನಾಡಲು ಪ್ರೇರಣೆ ನೀಡಿದರು. ನಾನು ಈ ಹಂತಕ್ಕೇರಲು ಕ್ಷೇತ್ರದ ಜನರ ಆಶೀರ್ವಾದ, ಮುಖಂಡರ ಸಹಕಾರ, ಕಾರ್ಯಕರ್ತರ ನಿರಂತರ ಪ್ರಚಾರ ಕಾರಣ. ನನ್ನ ಗೆಲುವನ್ನು ಕ್ಷೇತ್ರದ ಜನರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.

2004ರಲ್ಲಿ ಮೊದಲ ಬಾರಿಗೆ ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್‌ನಿಂದ ಬಿ.ಎಸ್‌. ಪಾಟೀಲ ಕಣಕ್ಕಿಳಿದಿದ್ದರು. ಅವರನ್ನು ಗೆಲ್ಲಿಸಲು ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದೇ ಪ್ರಚಾರ ಮಾಡಲಾಯಿತು. ಆದರೆ ಜನರು ನನ್ನನ್ನು ಬೆಂಬಲಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದೇನೆ. ಕ್ಷೇತ್ರದ ಜನರಿಗೆ ನಾನು ಋಣಿಯಾಗಿರುತ್ತೇನೆ ಎಂದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ನಾನು ಹಾಗೂ ಪ್ರಹ್ಲಾದ ಜೋಶಿ ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೇರುತ್ತ ಬಂದಿದ್ದು, ಬೂತ್‌ ಮಟ್ಟದಲ್ಲಿ ಕೆಲಸ ಮಾಡಿದ ಕಾರ್ಯಕರ್ತರ ನಿಷ್ಠೆಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂಬುದಕ್ಕೆ ನಾವೇ ಉದಾಹರಣೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಜಾತಿ ರಾಜಕಾರಣ ನಡೆಯಲಿಲ್ಲ. ಅಭಿವೃದ್ಧಿನೋಡಿ ಜನರು ಮತ ನೀಡಿದ್ದಾರೆ. ಜೋಶಿ ಅವರು ಸಚಿವರಾಗಿ ಬದ್ಧತೆಯಿಂದ ಕಾರ್ಯ ಮಾಡುವ ವಿಶ್ವಾಸವಿದೆ ಎಂದು ನುಡಿದರು.

ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶೆಟ್ಟರ ಹಾಗೂ ಜೋಶಿ ಜೋಡೆತ್ತುಗಳು ಕೂಡಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವ ವಿಶ್ವಾಸವಿದೆ. ಪ್ರಹ್ಲಾದ ಜೋಶಿ ಸ್ಥಿತಪ್ರಜ್ಞ ಹಾಗೂ ಸಮಯಪ್ರಜ್ಞ ವ್ಯಕ್ತಿ. ಅವರು ವಾಮನರಲ್ಲ, ತ್ರಿವಿಕ್ರಮರು. ಹಿಡಿದ ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಅವರ ಹಿರಿಮೆ. ಜಾತಿ, ಪಂಥ ನೋಡಿ ಮತ ಹಾಕುವುದಿಲ್ಲ. ಜನರು ಅಭಿವೃದ್ಧಿ ಕಾರ್ಯವನ್ನು ನೋಡಿ ಮತದಾನ ಮಾಡುತ್ತಾರೆ ಎಂಬುದನ್ನು ಜೋಶಿ ಅವರ ಗೆಲುವು ನಿರೂಪಿಸಿದೆ ಎಂದರು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರದ್ಯುಮ್ನಾಚಾರ್ಯ ಜೋಶಿ, ಜ್ಯೋತಿ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ, ಸಿ.ಎಂ. ನಿಂಬಣ್ಣವರ, ಎಸ್‌.ವಿ. ಸಂಕನೂರ, ಶಂಕರ ಪಾಟೀಲ ಮುನೇನಕೊಪ್ಪ, ಮುಖಂಡರಾದ ಎಸ್‌.ಐ. ಚಿಕ್ಕನಗೌಡರ, ಸೀಮಾ ಮಸೂತಿ, ನಾಗೇಶ ಕಲಬುರ್ಗಿ, ಈರಣ್ಣ ಜಡಿ ಇದ್ದರು. ಮಾ.ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಕಾವ್ಯಾ ಗುಂಡೂರ ಪ್ರಾರ್ಥಿಸಿದರು. ಮಹದೇವ ಕರಮರಿ ಸ್ವಾಗತಿಸಿದರು. ಮಹೇಶ ಟೆಂಗಿನಕಾಯಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next