Advertisement

ಕಚೇರಿಗೆ ಅಲೆಸದೆ ಜನರ ಕೆಲಸ ಮಾಡಿಕೊಡಿ: ಸಚಿವ

08:59 PM Jun 01, 2019 | Team Udayavani |

ಮೈಸೂರು: ಗಡಿ ಗ್ರಾಮಗಳಾದ ಮಲುಗನಹಳ್ಳಿ, ಬೆಟ್ಟಹಳ್ಳಿ ವ್ಯಾಪ್ತಿಯಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆ ತೆರೆಯಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Advertisement

ಕೆ.ಆರ್‌.ನಗರ ತಾಲೂಕು ಶೀಗವಾಳು ಗ್ರಾಪಂ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದ ಉಮೇಶ್‌ ಎಂಬವರ ಮನೆಯಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯವಿದ್ದ ಅವರು, ಶನಿವಾರ ಮಲುಗನಹಳ್ಳಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಕೇಂದ್ರ ಭರವಸೆ: ಹದಗೆಟ್ಟಿರುವ ಈ ಭಾಗದ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕುಡಿಯುವ ನೀರು ಪೋಲಾಗುವುದನ್ನು ತಪ್ಪಿಸಲು ನಲ್ಲಿಗಳಿಗೆ ಟ್ಯಾಪ್‌ ಹಾಗೂ ಮೀಟರ್‌ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಗಳ ಕಟ್ಟಡ ದುರಸ್ತಿ, ಶಿಕ್ಷಕರ ನಿಯೋಜನೆಗೆ ಸೂಚಿಸಿದ ಅವರು, ಗ್ರಾಮದಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಅಕ್ರಮ ಮದ್ಯ ಮಾರಾಟ ತಡೆಗಟ್ಟಿ: ಮಲುಗನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ದೂರಿದಾಗ, ಅಬಕಾರಿ ಇಲಾಖೆ ಅಧಿಕಾರಿ ರಮ್ಯಾ ವಿರುದ್ಧ ಕಿಡಿಕಾರಿದ ಸಚಿವರು, ಅಕ್ರಮಕ್ಕೆ ಕಡಿವಾಣ ಹಾಕದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಗೆ ತಡವಾಗಿ ಆಗಮಿಸಿದ್ದ ಈ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸಚಿವರು, ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ ನಿಮ್ಮ ಮೇಲಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

Advertisement

ಅಹವಾಲು ಸ್ವೀಕಾರ: ಇದಕ್ಕೂ ಮುನ್ನ ಮಲುಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಬಳಿಕ ಸಚಿವರು ಕಾಳಮ್ಮನಕೊಪ್ಪಲು, ಶೀಗವಾಳು ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಮುಡಾ ಅಧ್ಯಕ್ಷ ಎಚ್‌.ಎನ್‌.ವಿಜಯ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌, ಎಎಸ್‌ಪಿ ಕ್ಷಮಾಮಿಶ್ರಾ, ತಹಶೀಲ್ದಾರ್‌ ಮಂಜುಳಾ, ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ತಾಪಂ ಸದಸ್ಯ ಎಚ್‌.ಟಿ.ಮಂಜುನಾಥ್‌, ಡೇರಿ ಅಧ್ಯಕ್ಷ ಎಂ.ಆರ್‌.ನಟೇಶ್‌, ಗ್ರಾಪಂ ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷ ಸ್ವಾಮಿಗೌಡ ಮತ್ತಿತರರಿದ್ದರು.

ಸೌಲಭ್ಯ ತಲುಪಿಸಿ: ಮಲುಗನಹಳ್ಳಿ ಗ್ರಾಮದಲ್ಲಿ 64 ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಅಲ್ಲದೇ, ಗ್ರಾಮಲೆಕ್ಕಾಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ವಿಧವಾ, ಅಂಗವಿಕಲ, ಸಂಧ್ಯಾಸುರಕ್ಷಾ ಯೋಜನಾ ಫ‌ಲಾನುಭವಿಗಳನ್ನು ಗುರುತಿಸಿ ಅವರಿಗೆ ಅನುಕೂಲ ಕಲ್ಪಿಸಬೇಕು.

ಪಡಿತರ ಚೀಟಿ, ಆಶ್ರಯ ಮನೆ, ಸಂಧ್ಯಾ ಸುರಕ್ಷಾ ಹಾಗೂ ಸರ್ಕಾರದ ಇತರೆ ಯೋಜನೆಗಳ ಪ್ರಯೋಜನ ಪಡೆಯಲು ಸಾರ್ವಜನಿಕರು ನೀಡಿದ ಅರ್ಜಿ, ಅಹವಾಲು ಸ್ವೀಕರಿಸಿ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next