Advertisement

ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಯುದ್ದೋಪಾದಿಯಲ್ಲಿ ಕೆಲಸ ಮಾಡಿ

02:27 AM Nov 16, 2021 | Team Udayavani |

ಮಂಗಳೂರು: ಮನುಕುಲಕ್ಕೆ ಆಘಾತ ನೀಡಿ, ಆರ್ಥಿಕ ಸ್ಥಿತಿ-ಗತಿಯನ್ನು ಏರು-ಪೇರು ಮಾಡಿದ ಕೋವಿಡ್‌ ಸೋಂಕನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಕೋವಿಡ್‌ ನಿರ್ವಹಣೆ ಹಾಗೂ ಲೋಕಾಯುಕ್ತ ಪ್ರಕರಣಗಳ ಪರಿಶೀಲನೆ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಅನ್ನು ಜಿಲ್ಲೆಯಲ್ಲಿ ಶೇ.90ರಷ್ಟು ಹಾಗೂ 2ನೇ ಡೋಸ್‌ ಅನ್ನು ಶೇ. 59 ಮಂದಿ ಪಡೆದಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯ ಲೇಬೇಕು. ಕೋವಿಡ್‌ ಸೋಂಕಿನಿಂದ ಹೊರಬರದೆ ಇದ್ದಲ್ಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

ಇದೀಗ ಶಾಲೆಗಳು ಆರಂಭಗೊಂಡಿದ್ದು, ಅಲ್ಲಿ ಕೋವಿಡ್‌ ನಿಯಮ ಪಾಲನೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ವತ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿ. ಪಂ. ಸಿಇಒ ಮೂಲಕ ವರದಿ ನೀಡಬೇಕು ಎಂದು ಲೋಕಾಯುಕ್ತರು ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಕಾರಣ
ದಿಂದಾಗಿ 210 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಐದು ಮಕ್ಕಳು ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು ಕೂಡಲೇ ಈ ಮಕ್ಕಳಿಗೆ ಸರಕಾರದ ವತಿಯಿಂದ ನೀಡಿರುವ ಪರಿಹಾರವನ್ನು ಕೂಡಲೇ ಒದಗಿಸುವಂತೆ ಸೂಚಿಸಿದರು.

Advertisement

ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಈಗಾಗಲೇ 2,467 ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದ್ದು, ಲಸಿಕೆ ಬಂದ ಕೂಡಲೇ ಅವರಿಗೆ ಕೊಡಿಸಲಾಗುವುದು ಎಂದು ಡಿಡಿಪಿಐ ತಿಳಿಸಿದರು. ಮುಂದಿನ ಎರಡು-ಮೂರು ತಿಂಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಲೋಕಾಯುಕ್ತರು ಈ ಸಂದರ್ಭ ಅವರಿಗೆ ಸೂಚಿಸಿದರು.

ಇದನ್ನೂ ಓದಿ:ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

ಗ್ರಾ.ಪಂ.ಗಳಿಗೆ ಅನುದಾನ
ಕೋವಿಡ್‌ ನಿರ್ವಹಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ಪ್ರತಿ ಗ್ರಾ. ಪಂ.ಗಳಿಗೆ ಸರಕಾರ 50 ಸಾವಿರ ರೂ. ಗಳ ಅನುದಾನ ಬಿಡುಗಡೆ ಮಾಡಿದೆ. ಆ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಆ ಹಣ ಸದ್ಬಳಕೆಯಾಗಿರುವ ಬಗ್ಗೆ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯ ಇಬ್ಬರು ಸಿಬಂದಿ ಸಾರ್ವಜನಿಕರ ಕೆಲಸಕ್ಕೆ ವಿಪರೀತ ಅಡಚಣೆಯುಂಟು ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಈ ರೀತಿ ತೊಂದರೆಯುಂಟು ಮಾಡಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಎಚ್ಚರಿಕೆ ನೀಡಿದರು.

ಜಿ. ಪಂ. ಸಿಇಒ ಡಾ| ಕುಮಾರ್‌, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಹಾಗೂ ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ. ಪಂ. ಇಒಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿದ್ದರು.

ಶಾಲೆ, ಲಸಿಕಾ ಕೇಂದ್ರಕ್ಕೆ ಭೇಟಿ
ಇದಕ್ಕೂ ಮುನ್ನ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರು ನಗರದ ಗಾಂಧಿನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳು ಕೋವಿಡ್‌ ಸಮುಚಿತ ವರ್ತನೆಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಅನಂತರ ಅವರು ನಗರದ ವೆನ್ಲಾಕ್ಆಸ್ಪತ್ರೆಯಲ್ಲಿರುವ ಆಯುಷ್‌ ಘಟಕದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next