Advertisement

ಒಳಮೀಸಲು ವಿಚಾರ: ಆರ್ ಎಸ್ಎಸ್ ರೂಪಿಸಿತು ಪರಿಹಾರ

01:48 PM Dec 17, 2022 | Team Udayavani |

ಒಳಮೀಸಲು ಜಾರಿ ವಿಚಾರದಲ್ಲಿ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಒಂದು ‘ಕ್ರೆಡಿಟ್ ವಾರ್’ ಪ್ರಾರಂಭಗೊಂಡಿದೆ. ಚುನಾವಣೆ ಹತ್ತಿರದಲ್ಲೇ ಇರುವುದರಿಂದ ‘ಋಣಭಾರ’ ಹೇರಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಮೊದಲ್ಗೊಂಡು ಡಿ.ಕೆ.ಶಿವಕುಮಾರ್ ವರೆಗೂ ಪೈಪೋಟಿ ನಡೆಯುತ್ತಿದೆ. ಸೋತು ಮೂಲೆ ಸೇರಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕೂಡಾ ಈಗ ಹಠಾತ್ ಆವೀರ್ಭೂತರಾಗಿ ಒಳಮೀಸಲಿನ ಒಳತೋಟಿ ಬಿಚ್ಚಿಟ್ಟಿದ್ದಾರೆ. ಆದರೆ ಜೇನಿನ ಗೂಡಿಗೆ ಕೈ ಹಾಕುವಂಥ ಈ ಸಾಹಸವನ್ನು ರಾಜಕೀಯ ಪಕ್ಷಗಳು ಅಷ್ಟು ಸಲೀಸಾಗಿ ಮಾಡುತ್ತಿರುವುದಾದರೂ ಏಕೆ? ದಶಕಗಳಿಂದ ಈ ಬೇಡಿಕೆ ವಿಚಾರದಲ್ಲಿ ದಲಿತ ಸಮುದಾಯದ ಮುಂಗೈಗೆ ತುಪ್ಪ ಸವರುತ್ತಿದ್ದ ಕಾಂಗ್ರೆಸ್ ಕೂಡಾ ಈಗ ಅವಸರದ ಪಾದಯಾತ್ರೆಗೆ ಮುಂದಾಗುತ್ತಿರುವುದೇಕೆ? ಎಂಬ ಪ್ರಶ್ನೆ ಬಂದರೆ ಅದಕ್ಕೆ ಚುನಾವಣೆ ಎಂಬ ಸರಳ ಉತ್ತರ ನೀಡಬಹುದು. ಆದರೆ ಈ ಉತ್ತರ ಸರಳವೂ ಅಲ್ಲ, ಸಮಂಜಸವೂ ಅಲ್ಲ! ಏಕೆಂದರೆ ಇದು ಒಂದು ಚುನಾವಣೆಯ ವಿಷಯಕ್ಕೆ ಸೀಮಿತವಾಗುವ ಸಣ್ಣ ಸುದ್ದಿಯಲ್ಲ.

Advertisement

ಒಳಮೀಸಲಿನ ಸುಕ್ಕು ಬಿಡಿಸುವ ಹಿಂದೆ ನಡೆದ ಪ್ರಯತ್ನಗಳ ಮೂಲ ಹುಡುಕುತ್ತಾ ಹೋದರೆ ಅದು ಆರ್ ಎಸ್ಎಸ್ ಹೆಬ್ಬಾಗಿಲು ನಾಗಪುರಕ್ಕೆ ಹೋಗಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಬಹು ವರ್ಷಗಳಿಂದ ತಳ ಸಮುದಾಯದ ಆಂತರ್ಯದಿಂದ ವ್ಯಕ್ತವಾಗುತ್ತಿದ್ದ ಈ ಆಗ್ರಹವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ವರ್ಷದ ಆರಂಭದಲ್ಲೇ ಈ ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿರ್ಧಾರವನ್ನು ತೆಗೆದುಕೊಂಡಿತು. ಅದು 2022ರ ಜುಲೈ ತಿಂಗಳಲ್ಲಿ ಲೋಕಮುಖಕ್ಕೆ ಪ್ರಕಟಿತಗೊಂಡಿತು.

ನಿಮಗೆಲ್ಲ ನೆನಪಿರಬಹುದು. ಜುಲೈ 12ರಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿಕೊಟ್ಟರು. ಅಲ್ಲಿ ಸುಮಾರು 21 ದಲಿತ ಹಾಗೂ ಹಿಂದುಳಿದ ವರ್ಗದ ಮಠಾಧೀಶರ ಜತೆಗೆ ಅವರು ಮಹತ್ವದ ಸಂವಾದ ನಡೆಸಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. “ಹಿಂದು ಸಮಾಜದ ಎಲ್ಲ ಅಂಗಗಳನ್ನು ಸುಸ್ಥಿತಿಯಲ್ಲಿ ಇಡಬೇಕಾದದ್ದು ಸಂಘದ ಕರ್ತವ್ಯ” ಎಂದು ಭಾಗವತ್ ಆಡಿದ ಮಾತು ಅಂದು ಭಾರಿ ಚರ್ಚೆ ಹುಟ್ಟು ಹಾಕಿತ್ತು. ಆದರೆ ಅಂದು ಅವರಾಡಿದ ಒಂದು ವಾಕ್ಯ ಯಾವುದೇ ಮಹತ್ವ ಪಡೆದುಕೊಳ್ಳಲೇ ಇಲ್ಲ “ಇಂದು ನೀವೆಲ್ಲರೂ ಇಟ್ಟ ಬೇಡಿಕೆ ಬೀಜರೂಪದಲ್ಲಿದೆ. ಆರ್ ಎಸ್ಎಸ್ ಈ ವಿಚಾರದಲ್ಲಿ ನಿಮ್ಮ ಜತೆ ಇರುತ್ತದೆ. ಆದರೆ ಯಾವುದೇ ಸಮಸ್ಯೆಯನ್ನು ಬಗೆಹರಿಸುವಾಗ ಸಂಘಕ್ಕೆ ಅದರದ್ದೇ ಆದ ಒಂದು ಶೈಲಿ ಇದೆ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ” ಎಂದು ಹೇಳಿ ಹೋದರು. ಈ ಸಂವಾದದ ಹಿಂದಿನ ದಿನ ರಾತ್ರಿ ಚಿತ್ರದುರ್ಗದಲ್ಲೇ ತಂಗಿದ್ದ ಮೋಹನ್ ಭಾಗವತರು ಕರ್ನಾಟಕ ಬಿಜೆಪಿಯ ದಲಿತ ಮುಖಂಡರುಗಳಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಹಾಗೂ ಇನ್ನಿತರರ ಜತೆ ಮಹತ್ವದ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಆರ್ ಎಸ್ಎಸ್ ಸಹ ಸರಕಾರ್ಯವಾಹ ಮುಕುಂದ್ ಹಾಗೂ ವಾದಿರಾಜ್ ಸಾಮರಸ್ಯರಂಥ ಸಂಘದ ಸೂಕ್ಷ್ಮ ಮನಸ್ಸಿನ ಹಿರಿಯರು ಇದ್ದರು. ಅಲ್ಲಿ ಒಳಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ನಿಜಾರ್ಥದಲ್ಲಿ ಗಹನವೂ-ಗಂಭೀರವೂ ಆದ ಚರ್ಚೆ ನಡೆದು ಈ ಸುಕ್ಕನ್ನು ಬಿಡಿಸುವುದು ಅತ್ಯಂತ ಅವಶ್ಯ ಹಾಗೂ ಅನಿವಾರ್ಯ ಎಂಬುದನ್ನು ಮೋಹನ್ ಭಾಗವತ್ ಮನಗಂಡರು. ಮಠಾಧೀಶರ ಮನದ ಬಯಕೆಯೂ ಇದೇ ಆಗಿದ್ದರಿಂದ ಬೀಜರೂಪದ ಬೇಡಿಕೆಯನ್ನು ಪೊರೆದು ಪೋಷಿಸುವ ನಿರ್ಧಾರಕ್ಕೆ ಬರಲಾಗಿತ್ತು.

ನಂತರ ಈ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಳಿಯೂ ಸಂಘ ಚರ್ಚೆ ನಡೆಸಿತ್ತು ಎನ್ನಲಾಗಿದೆ. ಒಳಮೀಸಲು ವಿಚಾರಕ್ಕೆ ಸಂಬಂಧಪಟ್ಟ ಜಾತಿವಾರು ಮಾಹಿತಿ ಹಾಗೂ ಅದರ ಹಂಚಿಕೆ ವಿಧಾನದ ಬಗ್ಗೆ ಮಾಹಿತಿ ತರಿಸಿಕೊಂಡ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒಳಮೀಸಲು ಜಾರಿಯ ಅನಿವಾರ್ಯತೆ ಬಗ್ಗೆ ಮೋದಿ ಹಾಗೂ ಶಾಗೆ ಮನದಟ್ಟು ಮಾಡಿಕೊಟ್ಟರು. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಪರಿಶಿಷ್ಟ ಜಾತಿ-ಪಂಗಡದ ಮೀಸಲು ಹಂಚಿಕೆ ಹಾಗೂ ಒಳಮೀಸಲು ವಿಚಾರವನ್ನು ಒಟ್ಟೊಟ್ಟಿಗೆ ಬಗೆಹರಿಸುವ ಚಿಂತನೆಗಳು ಪೂರ್ಣಗೊಂಡವು. ಆ ಬಳಿಕವೇ ಅದು ಸರ್ಕಾರದ ಹಂತಕ್ಕೆ ರವಾನೆಯಾಗಿದ್ದು.

Advertisement

ಪಂಚಮಸಾಲಿ ಮೀಸಲು, ಪರಿಶಿಷ್ಟ ಜಾತಿ-ಪಂಗಡದ ಮೀಸಲು ಹೆಚ್ಚಳ, ಒಳಮೀಸಲು ಜಾರಿ ಬೇಡಿಕೆಯ ಬಾಣದ ಏಟುಗಳನ್ನು ಪ್ರತಿ ದಿನವೂ ತಿಂದು ಹೈರಾಣಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಸಂಘ ಹಾಗೂ ಬಿಜೆಪಿಯಿಂದ ‘ಗೋ ಅಹೆಡ್, ಮುಂದಿನದ್ದು ನಮಗೆ ಬಿಡಿ’ ಎಂಬ ಸೂಚನೆ ಸಿಗುವವರೆಗೂ ಮಾನಸಿಕವಾಗಿ ಜರ್ಜರಿತರಾಗಿಯೇ ಇದ್ದರು. ಚುನಾವಣಾ ಹೊಸ್ತಿಲಲ್ಲಿ ಈ ಚಕ್ರವ್ಯೂಹದಿಂದ ಬಿಡಿಸಿಕೊಳ್ಳುವ ದಾರಿಗಾಗಿ ಹೆಣಗಾಡುತ್ತಲೇ ಇದ್ದರು. ಬೊಮ್ಮಾಯಿ ಹಗ್ಗದ ಮೇಲೆ ನಡೆಯುವ ಪ್ರಯಾಸ ಕಂಡು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಮುಸಿಮುಸಿ ನಗುತ್ತಿದ್ದರೇ ವಿನಾ ಈ ವಿಚಾರದಲ್ಲಿ ಪಕ್ಷದ ನಿಲುವನ್ನು ಪ್ರಕಟಪಡಿಸುವ ಗೊಡವೆಗೆ ಹೋಗಲಿಲ್ಲ. ಅಸಮಾಧಾನದ ಲಾಭ ಪಡೆಯುವುದು ಹೇಗೆಂಬ ತಂತ್ರಗಾರಿಕೆಯನ್ನೂ ನಡೆಸಲಿಲ್ಲ.

ಆದರೆ ಇದಕ್ಕಿದ್ದಂತೆ ಮೈಮೇಲೆ ಶಕ್ತಿಮಾನ್ ಆವರಿಸಿದಂತೆ ಎದ್ದು ಬಂದ ಬೊಮ್ಮಾಯಿ ಒಂದು ದಿನ ಮೀಸಲು ಹೆಚ್ಚಳ ತೀರ್ಮಾನ ಘೋಷಿಸಿಯೇ ಬಿಟ್ಟರು. ಸಾಲದಕ್ಕೆ ತಾಕತ್ತಿದ್ದರೆ ಒಳಮೀಸಲು ವಿಚಾರದಲ್ಲಿ ನಿರ್ಧಾರಕ್ಕೆ ಬನ್ನಿ. ನಾವು ಶೀಘ್ರದಲ್ಲೇ ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದರು.

“ಬಳಲಿ ಬಸವಳಿದು ಹೋಗಿದ್ದ ಬೊಮ್ಮಾಯಿ ಅವರನ್ನು ಇದಾದ ತಕ್ಷಣವೇ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಒಮ್ಮಿಂದೊಮ್ಮೆಲೆ ಭಲೇ ಭಲೇ ಬೊಮ್ಮಾಯಿ“ಎಂದು ವ್ಯಾಖ್ಯಾನಿಸಲಾಯಿತು. ಬೊಮ್ಮಾಯಿ ಅವರನ್ನು ರಾಜ್ಯ ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಕೆಲವರು ಪ್ರಶಂಸಿಬಿಟ್ಟರು. ಸಂಜೆ ಆರರ ನಂತರ ಸಂಪುಟದ ಸ್ನೇಹಿತ ಸಿ.ಸಿ.ಪಾಟೀಲ್ರ ಅತಿಥಿಗೃಹದಲ್ಲಿ ನಡೆಯುವ ‘ಮಿತ್ರಭೋಜನ’ದಲ್ಲಿ ಬೊಮ್ಮಾಯಿ ಇಂಥ ದಿಟ್ಟ ನಿರ್ಧಾರ ತೆಗೆದುಕೊಂಡರು ಎಂಬ  ಮಾತುಗಳು ಕೇಳಿ ಬಂದವು. ಬೊಮ್ಮಾಯಿ ಪ್ರತಿದಿನ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ವಾಸ್ತವದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಒಳಮೀಸಲು ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದರು ತಾತ್ವಿಕವಾಗಿ ಜಾರಿಯ ಪರ ಇದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ಪ್ರಭಾವಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಾವಧಿಯಲ್ಲಿ ಈ ವಿಚಾರ ಪಕ್ಕಕ್ಕೆ ಇಟ್ಟರು. ಇಲ್ಲಿಯೂ ಯಾರನ್ನು ಪ್ರಶ್ನಿಸಬೇಕೋ, ಅವರನ್ನು ಪ್ರಶ್ನಿಸುವಲ್ಲಿ ಬೊಮ್ಮಾಯಿ ಎಡವಿದರು.

ಅದೇನೇ ಇರಲಿ. ಈಗ ಒಳಮೀಸಲು ಹಂಚಿಕೆಯ ಜಟಿಲ ಸಮಸ್ಯೆ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸಭೆ ಇದಕ್ಕೆ ಬೇಕಾದ ತಾಲೀಮು ನಡೆಸುತ್ತಿದೆ. ಒಂದು ಮೂಲದ ಪ್ರಕಾರ ಸಂವಿಧಾನದ 341ನೇ ವಿಧಿಯ ತಿದ್ದುಪಡಿ ಇಲ್ಲದೆಯೂ ಒಳಮೀಸಲು ಜಾರಿಗೆ ಮಾರ್ಗಗಳಿವೆ. ಆದರೆ ಹಂಚಿಕೆಯ ಮಾದರಿ ಹೇಗಿರಬೇಕೆಂಬ ಬಗ್ಗೆ ಚರ್ಚೆ ಸಾಗಿದೆ. ನ್ಯಾ.ಮೂ.ಸದಾಶಿವ ಆಯೋಗದ ವರದಿ ಅನುಸಾರ ಒಳಮೀಸಲು ನಿಗದಿ ಈಗ ಅಸಾಧ್ಯ. ಏಕೆಂದರೆ ಮೀಸಲು ಪ್ರಮಾಣವನ್ನು ಸರ್ಕಾರ ಈಗ ಹೆಚ್ಚಳ ಮಾಡಿದೆ. ಹೀಗಾಗಿ ಶೇ.17ರ ಮೀಸಲು ಪ್ರಮಾಣವನ್ನು ಆಧರಿಸಿಯೇ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿಕೊಡುವುದು ಸೂಕ್ತ ಎಂದು ಹೇಳಲಾಗುತ್ತಿದೆ. ಯಾವಾಗ ದಲಿತ ಒಳಮೀಸಲು ವಿಚಾರದಲ್ಲಿ ಆರ್ ಎಸ್ಎಸ್ ರೂಪುರೇಷೆ ರೂಪಿಸಿದೆ ಎಂದು ಗೊತ್ತಾಯ್ತೋ, ಆ ಕ್ಷಣದಿಂದ ನಾವೇ ಮಾಡಿದ್ದು ಎಂಬ ಕ್ರೆಡಿಟ್ ಕಲಹ ರಾಜ್ಯದಲ್ಲಿ ಈಗ ಜೋರಾಗಿದೆ. ಆದರೆ ದಲಿತ ಸಮುದಾಯದ ಬಹುಕಾಲದ ಬೇಡಿಕೆ ವಿಚಾರದಲ್ಲಿ ಆರ್ ಎಸ್ಎಸ್ ನಡೆಸಿದ ಪ್ರಯತ್ನಗಳ “ಆಳ-ಅಗಲ’ವನ್ನು ವಾಸ್ತವದ ಕಣ್ಣಿಂದ ನೋಡದೇ ಪೂರ್ವಗ್ರಹದ ಬಣ್ಣವೇ ಅಂದಗೆಡಿಸುತ್ತಿದೆ ಎಂಬುದು ವಿಪರ್ಯಾಸ.

ರಾಘವೇಂದ್ರ ಭಟ್

Advertisement

Udayavani is now on Telegram. Click here to join our channel and stay updated with the latest news.

Next