Advertisement

ಪಿಡಿಒಗಳಿಗೆ ಕೆಲಸದ ಹೊರೆ, ಜನಸಾಮಾನ್ಯರಿಗೆ ಅಲೆದಾಟದ ಬರೆ

08:50 AM Oct 31, 2022 | Team Udayavani |

ಬೈಂದೂರು: ಪ್ರತೀ ಊರುಗಳಲ್ಲೂ ಕೂಡ ಗ್ರಾಮಸೌಧ ಎಂದರೆ ಊರಿನ ಸಂಪೂರ್ಣ ಆಡಳಿತದ ಕೇಂದ್ರವಾಗಿದೆ. ಸರಕಾರ ಹಾಗೂ ಖಾಸಗಿ ಸೇರಿದಂತೆ ಪ್ರತೀ ಯೋಜನೆ ಹಾಗೂ ಕಾರ್ಯಗಳಿಗೆ ಪಂಚಾಯತ್‌ ಗಮನ ಕಡ್ಡಾಯ.

Advertisement

ಆದರೆ ಸರಕಾರದ ಮಿತಿ ಮೀರಿದ ಯೋಜನೆಗಳ ಅನುಷ್ಠಾನ ಮತ್ತು ಈ ಆಡಳಿತದ ಪ್ರಭಾವಗಳಿಂದ ಗ್ರಾಮೀಣ ಭಾಗದಲ್ಲಿ, ಗ್ರಾ. ಪಂ.ಗಳಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಗಳನ್ನು ಹುಡುಕುವುದೇ ಕಷ್ಟವಾಗಿ ಬಿಟ್ಟಿದೆ. ಮಾತ್ರವಲ್ಲದೆ ಜನಸಾಮಾನ್ಯರು ಗ್ರಾ. ಪಂ.ಗಳಿಗೆ ಅಲೆಯುವುದು ಬಿಟ್ಟರೆ ಕೆಲಸಗಳಾಗದೆ ಇರುವುದು ಆಡಳಿತ ವ್ಯವಸ್ಥೆಯ ಹಿನ್ನಡೆಯಾಗಿದೆ.

ಜನಸಾಮಾನ್ಯರ ಸಮಸ್ಯೆಗಳೇನು?

ಮುಖ್ಯವಾಗಿ ಪಂಚಾಯತ್‌ಗಳಲ್ಲಿ 9/11, ವಿದ್ಯುತ್‌ ಪರವಾನಿಗೆ, ನಿರಕ್ಷೇಪಣ ಪತ್ರ, ಉದ್ಯಮ ಪರವಾನಿಗೆ, ಆಶ್ರಯ ಮನೆ ಯೋಜನೆ 15ನೇ ಹಣಕಾಸು ನಿರ್ವಹಣೆ, ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಹಬ್ಬ ಕೆಲವು ತುರ್ತು ಯೋಜನೆಗಳು ಸೇರಿದಂತೆ 23 ಇಲಾಖೆಯ ಪ್ರಾಥಮಿಕ ಹಂತದ ನಿರ್ವಹಣೆಯ ಜವಾಬ್ದಾರಿ ಪಂಚಾಯತ್‌ ಅಭಿವೃದ್ಧಿಗಳದ್ದಾಗಿರುತ್ತದೆ ಮಾತ್ರವಲ್ಲದೆ ಕಟ್ಟಡ ಪರವಾನಿಗೆ ಆನ್‌ ಲೈನ್‌ ಇರುವ ಕಾರಣ ಜಿ.ಪಿ.ಎಸ್‌. ಮುಂತಾದ ಪ್ರಕ್ರಿಯೆಗಳನ್ನು ಖುದ್ದು ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ಮಾಡಬೇಕಿದೆ.

ಆದರೆ ಈಗೀಗ ಪಂಚಾಯತ್‌ಗಳಲ್ಲಿ ಈ ಕಾರ್ಯ ನಿಭಾಯಿಸಬೇಕಾದ ಅಧಿಕಾರಿಗಳು ಕಾಣಸಿಗುತ್ತಿಲ್ಲ. ಶಿರೂರಿನಂತ ಅತೀ ದೊಡ್ಡ ಪಂಚಾಯತ್‌ಗಳಲ್ಲಿ ಪ್ರತಿದಿನ ನೂರಾರು ಜನರು ಕೆಲಸ ಕಾರ್ಯ ಬಿಟ್ಟು ವಾರಗಟ್ಟಲೆ ಪಂಚಾಯತ್‌ಗಳಿಗೆ ಅಲೆಯಬೇಕಾಗಿದೆ. ಆದರೆ ಅಧಿಕಾರಿಗಳು ಬ್ಯುಸಿ ಇರುವ ಕಾರಣ ಒಂದು ದಿನದ ಕೆಲಸಕ್ಕೆ ಮೂರು ದಿನ ಮಾಡುವಂತಾಗಿದೆ. ಇದರಿಂದಾಗಿ ಪಂಚಾಯತ್‌ಗಳಲ್ಲಿ ಅಗತ್ಯ ಕೆಲಸಗಳು ನಡೆಯುತ್ತಿಲ್ಲ ಎನ್ನುವುದು ಗ್ರಾ.ಪಂ. ಸದಸ್ಯರು, ಜನಸಾಮಾನ್ಯರ ಅಭಿಪ್ರಾಯವಾಗಿದೆ.

Advertisement

ಪಿ.ಡಿ.ಒ.ಗಳಿಗೆ ಬಿಡುವಿಲ್ಲದ ಕೆಲಸ

ಇತ್ತೀಚಿನ ದಿನಗಳಲ್ಲಿ ಜಿಲ್ಲಾಡಳಿತ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಬಿಡುವಿಲ್ಲದೆ ಕೆಲಸ ನೀಡುತ್ತಿದೆ, ಮಾತ್ರವಲ್ಲದೆ ವಾರಕ್ಕೆರಡು ಬಾರಿ ವಿವಿಧ ಸಭೆ, ಸರಕಾರಿ ಯೋಜನೆ ಅನುಷ್ಠಾನಕ್ಕೆ ವಿಶೇಷ ಸಭೆ ಸೇರಿದಂತೆ ಅಧಿಕ ಒತ್ತಡದ ಪರಿಣಾಮ ಪಂಚಾಯತ್‌ಗಳಲ್ಲಿ ಸ್ಥಳೀಯರಿಗೆ ಸೇವೆ ದೊರೆಯುತ್ತಿಲ್ಲ. ಗ್ರಾಮದ ಅಭಿವೃದ್ಧಿ ಅಧಿಕಾರಗಳಿಗೆ ಇಲಾಖೆಯ ಕಾರ್ಯಗಳ ಜತೆಗೆ ನರೇಗಾ ನಿರ್ವಹಣೆ, ಬೆಳೆ ಕಟಾವು, ತೋಟಗಾರಿಕಾ ಕೆಲಸ, ಸ್ವ-ಸಹಾಯ ಸಂಘ ನಿರ್ವಹಣೆ, ಆನ್‌ಲೈನ್‌ ಸೇವೆ, ದೂರದೃಷ್ಟಿ ಯೋಜನೆ, ಹೊಸ ಹೊಸ ಯೋಜನೆಗಳ ನಿರ್ವಹಣೆ ಜವಾಬ್ದಾರಿ ಜಿ.ಪಂ., ತಾ.ಪಂ. ಸಭೆಗಳಿಂದಾಗಿ ಪಂಚಾಯತ್‌ಗಳಲ್ಲಿ ಕರ್ತವ್ಯ ಸಾಧ್ಯವಾಗುವುದಿಲ್ಲ ಮತ್ತು ಜನರ ಕೈಗೂ ಕೂಡ ಸಿಗುತ್ತಿಲ್ಲ. ಮೂರು ತಿಂಗಳಿ ಗೊಮ್ಮೆ ನಡೆಯುವ ಕೆಡಿಪಿ ಸಭೆ ಕೂಡ ಮೂಲ ಆಶಯ ಮರೆತಂತಿದೆ.

ಉಡುಪಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್‌ ಗಳಲ್ಲಿ 134 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಉದ್ದೇಶದಿಂದ ಕಾರ್ಯನಿರ್ವಹಿಸುವ ಪಂಚಾಯತ್‌ಗಳು ಈಗೀಗ ಪ್ರತಿ ಯೊಂದಕ್ಕೂ ಕೇಂದ್ರೀಕರಣ ವ್ಯವಸ್ಥೆಗೆ ಒಳಪಟ್ಟಂತಿದೆ ಅನ್ನೋದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಜನರಿಗೆ ಸಮರ್ಪಕ ಸೇವೆ ದೊರೆಯುವಂತೆ ಮಾಡಬೇಕು ಮತ್ತು ಪಂಚಾಯತ್‌ಗಳ ಮೂಲ ಉದ್ದೇಶ ಈಡೇರಬೇಕಿದೆ. ಕೆಲವು ಕಡೆ ಸಿಬಂದಿ ಕೊರತೆ, ಇದರ ನಡುವೆ ಸರ್ವರ್‌ ಸಮಸ್ಯೆಯಿಂದಾಗಿ ಸಣ್ಣ ಕೆಲಸ ಕೂಡ ವಿಳಂಬವಾಗುತ್ತಿದೆ.

ಜನರಿಗೆ ಸೇವೆ ವ್ಯತ್ಯಯವಾಗದಂತೆ ಕ್ರಮ: ಸಾಮಾನ್ಯವಾಗಿ ಮುಖ್ಯ ಸಭೆಗಳಿದ್ದಾಗ ಮಾತ್ರ ಪಿ.ಡಿ.ಒ.ಗಳನ್ನು ಕರೆಯಲಾಗುತ್ತದೆ. ಇನ್ನುಳಿದಂತೆ ಅವರ ಸೇವೆ ಗ್ರಾ.ಪಂ. ನಲ್ಲಿರುತ್ತದೆ. ಜನರಿಗೆ ಸೇವೆ ವ್ಯತ್ಯಯವಾಗದಂತೆ ಪಂಚಾಯತ್‌ ನೋಡಿಕೊಳ್ಳಬೇಕಿದೆ. ಹೀಗಾಗಿ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.  –ಭಾರತಿ, ತಾ.ಪಂ . ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೈಂದೂರು

ಸಿಬಂದಿ ಕೊರತೆ, ಹೆಚ್ಚುವರಿ ಜವಾಬ್ದಾರಿಯಿಂದಾಗಿ ಸೇವೆ ವಿಳಂಬ: ಬಹುತೇಕ ಸರಕಾರಿ ಅಧಿಕಾರಿಗಳಿಗೆ ಸೇವೆಯ ಕಾರ್ಯವ್ಯಾಪ್ತಿ ಇರುತ್ತದೆ. ಆದರೆ ಪಿಡಿಒ ಗಳಿಗೆ ಜಾಬ್‌ ಚಾರ್ಟ್‌ ಇಲ್ಲ. ಇದರ ಜತೆಗೆ ಸಿಬಂದಿ ಕೊರತೆ, ಹೆಚ್ಚುವರಿ ಕೆಲಸಗಳ ಜವಾಬ್ದಾರಿಯಿಂದಾಗಿ ಜನರಿಗೆ ನೀಡುವ ಸೇವೆ ವಿಳಂಬವಾಗುತ್ತಿದೆ ಮತ್ತು ಜನಸಾಮಾನ್ಯರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ದೂಷಿಸುವಂತಾಗಿದೆ.    –ಮಂಜುನಾಥ ಶೆಟ್ಟಿ,, ಅಧ್ಯಕ್ಷರು, ಉಡುಪಿ ಜಿಲ್ಲಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘ

Advertisement

Udayavani is now on Telegram. Click here to join our channel and stay updated with the latest news.

Next