ಮೈಸೂರು: “ನಾನು ಮತ್ತೂಮ್ಮೆ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ, ಪಕ್ಷದ ಉಳಿವು ಮುಖ್ಯ. ಈ ದೃಷ್ಟಿಯಿಂದ ಕಾಂಗ್ರೆಸ್‌ನವರು ಆರೆಸ್ಸೆಸ್ ಕಾರ್ಯಕರ್ತರಂತೆ ಪಕ್ಷ ಸಂಘಟನೆಗೆ ದುಡಿಯಬೇಕೆಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸುಪ್ರೀಂಕೋರ್ಟ್‌ನಲ್ಲಿ ಅ.22ರಂದು ಅನರ್ಹ ಶಾಸಕರ ವಿಚಾರ ಏನಾಗುತ್ತೋ ಗೊತ್ತಿಲ್ಲ. ಆದರೆ, ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದು, ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಎಲ್ಲ ಕ್ಷೇತ್ರಗಳನ್ನು ಗೆದ್ದರೂ ಆಶ್ಚರ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ, ಹುಣಸೂರು ಕ್ಷೇತ್ರದಲ್ಲಿ ಎಚ್.ಪಿ.ಮಂಜುನಾಥ್ ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಿಸಿದರು.
ಯಡಿಯೂರಪ್ಪ ಒಲ್ಲದ ಶಿಶು: ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಒಲ್ಲದ ಶಿಶುವಾಗಿದ್ದಾರೆ. ಬಿಜೆಪಿ ನಾಯಕ ಸಂತೋಷ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಂದಿಗೆ ಯಡಿ ಯೂರಪ್ಪ ಸಂಬಂಧ ಚೆನ್ನಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರನ್ನು ನೋಡಿದರೆ ಎಂಥಾ ದುಸ್ಥಿತಿ ಬಂತು ಎಂದು ಅಯ್ಯೋ ಅನಿಸುತ್ತೆ. ಮುಖ್ಯಮಂತ್ರಿಯ ಸಚಿವಾಲಯದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯ ಇಲ್ಲ. ಅದನ್ನೂ ಹೈಕಮಾಂಡ್‌ನವರೇ ಮಾಡುತ್ತಿದ್ದಾರೆ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ವಿಷಯದಲ್ಲೂ ಹೈಕಮಾಂಡ್ ಹಸ್ತಕ್ಷೇಪ ಮಾಡಿರಲಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ಗೆ ಕರ್ನಾಟಕವೇ ಗೊತ್ತಿಲ್ಲ. ರಾಜ್ಯದಲ್ಲಿ 34 ಜಿಲ್ಲೆ ಇದೆ ಎಂದು ಬಾಲಿಶ ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಖಜಾನೆ ಖಾಲಿಯಾಗಿದೆ ಅಂದರೆ ಕಟೀಲ್ ಖಜಾನೆ ಲೂಟಿ ಹೊಡೆದಿದ್ದಾರೆ ಅಂತಾರೆ. ರಾಜಕೀಯ ಪ್ರಬುದ್ಧತೆ ಇಲ್ಲದಿದ್ದರೂ ಆರೆಸ್ಸೆಸ್ ಕಾರ್ಯಕರ್ತ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ