ಮಂಡ್ಯ: ಕೃಷಿ ಇಲಾಖೆಯಲ್ಲಿ ಬೆಟ್ಟದಷ್ಟು ಕೆಲಸ. ಅಧಿಕಾರಿಗಳಿರುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ವರ್ಷದಿಂದ ವರ್ಷಕ್ಕೆ ಇಲಾಖೆ ಅಧಿಕಾರಿಗಳ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತಲೇ ಇದೆ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪೂರಕವಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಸರ್ಕಾರಕ್ಕೆ ಆಸಕ್ತಿಯೇ ಇಲ್ಲವಾಗಿದೆ.
ಪ್ರಸ್ತುತ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ 48 ಹಾಗೂ ಕೃಷಿ ಅಧಿಕಾರಿಗಳ ಹುದ್ದೆ 45 ಸೇರಿದಂತೆ
93 ಹುದ್ದೆಗಳು ಖಾಲಿ ಇವೆ. ಹಲವಾರು ವರ್ಷಗಳಿಂದ ಹುದ್ದೆ ಖಾಲಿ ಇದ್ದರೂ ಅದನ್ನು ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ.
ಹೆಚ್ಚಿದ ಕೆಲಸದ ಹೊರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಾದ ಕೃಷಿ ಭಾಗ್ಯ, ಮಣ್ಣು ಆರೋಗ್ಯ ಅಭಿಯಾನ, ಯಂತ್ರಧಾರೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರೀಕರಣ, ಭುವನ್ ದೃಷ್ಟಿ, ಭೂ ಚೇತನ, ರಾಷ್ಟ್ರೀಯ ಸುಸ್ಥಿರ ಯೋಜನೆ, ಕೃಷಿ ಅಭಿಯಾನ, ಸಾವಯವ ಭಾಗ್ಯ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಕೃಷಿ ಪರಿಕರಗಳ ಗುಣ ನಿಯಂತ್ರಣ, ಬಿತ್ತನೆ ಬೀಜ ಮತ್ತು ಕೃಷಿ ಪರಿಕರಗಳ ವಿತರಣೆ, ರೈತರಿಗೆ ನೇರ ಸಹಾಯಧನ ವಿತರಣೆ, ಬೆಳೆ ವಿಮಾ ಯೋಜನೆ, ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಪರಿಹಾರ ಯೋಜನೆ, ಕೃಷಿ ಪ್ರಶಸ್ತಿ, ರೈತ ತರಬೇತಿ ಕಾರ್ಯಕ್ರಮಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿ 30 ರಿಂದ 35 ಯೋಜನೆಗಳನ್ನು ನಿಭಾಯಿಸಲು ಸಿಬ್ಬಂದಿ ಕೊರತೆ ಕಾಡುತ್ತಿದೆ.
ಇದರ ಜೊತೆಗೆ ಜಿಲ್ಲಾಡಳಿತದಿಂದ ಬೆಳೆ ಸರ್ವೇಕ್ಷಣೆ, ಪ್ರಕೃತಿ ವಿಕೋಪಗಳ ಸರ್ವೇಕ್ಷಣೆ, ಸಹಕಾರ ಸಂಘಗಳ ಚುನಾವಣೆ
ಹಾಗೂ ಜಿಪಂ ವತಿಯಿಂದ ಜಮಾಬಂಧಿ, ಸಾಮಾಜಿಕ ಲೆಕ್ಕ ಪರಿಶೋಧನಾ ಕಾರ್ಯ, ಗ್ರಾಮಸಭೆ, ಅಕ್ಷರ ದಾಸೋಹ, ಜೀತ ವಿಮುಕ್ತಿ, ಬಾಲ ಕಾರ್ಮಿಕರ ನಿರ್ಮೂಲನಾ ಉಸ್ತುವಾರಿ ಕಾರ್ಯಕ್ರಮಗಳ ನಿರ್ವಹಣೆ ಕೆಲಸಗಳನ್ನು ವಹಿಸಲಾಗುತ್ತಿದೆ.
ಮೊಬೈಲ್ ಆಧಾರಿತ ಬೆಳೆ ಕಟಾವು ಪ್ರಯೋಗಗಳನ್ನು ಕಳೆದ ಸಾಲಿನಿಂದ ಕೈಗೊಳ್ಳಲಾಗುತ್ತಿದೆ. ಒಬ್ಬ ಸಹಾಯಕ ಕೃಷಿ ಅಧಿಕಾರಿಗೆ ಸರಿಸುಮಾರು 20ರಿಂದ 30 ಪ್ರಯೋಗಗಳನ್ನು ಪ್ರತಿ ಹಂಗಾಮಿಗೂ ಹಂಚಿಕೆ ಮಾಡಲಾಗುವುದು. ಪ್ರತಿ ಹಂಗಾಮಿನಲ್ಲಿ 20 -30 ಪ್ರಯೋಗಗಳ ಫಾರಂ-1 ಅನುಮೋದನೆ ಮಾಡಲು 30ರಿಂದ 50 ದಿನಗಳು ಅವಶ್ಯವಿದ್ದು, ಫಾರಂ-2ರನ್ವಯ ಕಟಾವು ಕೈಗೊಳ್ಳಲು ಪ್ರತಿ ದಿನ ರೈತರೊಂದಿಗೆ ಸಂಪರ್ಕದಲ್ಲಿದ್ದು ಕಟಾವು ಪೂರ್ಣಗೊಳಿಸಲು 30ರಿಂದ 65 ದಿನಗಳು ಬೇಕಿದೆ. ಸಿಬ್ಬಂದಿ ಕೊರತೆಯಿಂದ ಕಾರ್ಯಕ್ರಮಗಳು, ಜನೆಗಳನ್ನು ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಹಲವು ಅಧಿಕಾರಿಗಳು ಹೇಳುವ ಮಾತು.
ಅರ್ಧದಷ್ಟೂ ಭರ್ತಿಯಾಗಿಲ್ಲ: ಪ್ರಸ್ತುತ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಗಳು ಹೋಬಳಿಯೊಂದರಲ್ಲಿ ಒಬ್ಬರು, ಇಬ್ಬರಂತಿದ್ದಾರೆ. ಕೆಲವೊಂದು ಹೋಬಳಿಗಳಲ್ಲಿ ಸಹಾಯಕ ಕೃಷಿ ಅಧಿಕಾರಿಗಳೇ ಇಲ್ಲ. ಮಂಜೂರಾದ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಲ್ಲದೆ, ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳಿಗೆ ಕ್ಷೇತ್ರ ಮಟ್ಟದಲ್ಲಿ ಯಾವುದೇ ಸಹಾಯಕ ಸಿಬ್ಬಂದಿ ಇಲ್ಲ. ಬಹುಪಾಲು ಮಂದಿಗೆ ಈ ತಂತ್ರಾಂಶ ಆಧಾರಿತ ಕಾರ್ಯಕ್ರಮಗಳಲ್ಲಿ ನೈಪುಣ್ಯತೆ, ತಾಂತ್ರಿಕ ಜ್ಞಾನವಿಲ್ಲ.
ಅದಕ್ಕೆ ಬೇರೊಬ್ಬರನ್ನು ಆಶ್ರಯಿಸುವ ಅನಿವಾರ್ಯತೆ ಇದೆ ಎನ್ನುವುದು ಇಲಾಖಾ ಅಧಿಕಾರಿಗಳು ಹೇಳುವ ಮಾತಾಗಿ¨
ಮಂಡ್ಯ ಮಂಜುನಾಥ್