Advertisement

Mangaluru ಕೊರತೆಗಳ ನಡುವೆಯೂ ಯುದ್ದೋಪಾದಿಯಲ್ಲಿ ಕೆಲಸ

12:09 AM Dec 17, 2023 | Team Udayavani |

ಮಂಗಳೂರು: ಹಲವು ಕೊರತೆಗಳ ನಡುವೆಯೂ ಲೋಕಾಯುಕ್ತಕ್ಕೆ ಬಂದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಲೋಕಾಯುಕ್ತ ನ್ಯಾ| ಮೂ| ಬಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

Advertisement

ಶನಿವಾರ ದ.ಕ ಜಿ. ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.

ಲೋಕಾಯುಕ್ತದಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು 600ರಿಂದ 700 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಸರಕಾರಕ್ಕೆ ಈಗಾಗಲೇ ತಿಳಿಸಲಾಗಿದೆ.

ಕೊರತೆಗಳ ಬಗ್ಗೆ ಗಮನ ಹರಿಸದೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲು ಲೋಕಾಯುಕ್ತದ ಪೊಲೀಸ್‌, ಆಡಳಿತ, ನ್ಯಾಯಾಂಗ ಮತ್ತು ತಾಂತ್ರಿಕ ಘಟಕಗಳಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದರು.

ಜಾಗೃತಿ, ವಿಶ್ವಾಸ ಹೆಚ್ಚಳ
ಈ ಹಿಂದೆ ವರ್ಷಕ್ಕೆ 3,000-4,000 ಪ್ರಕರಣಗಳು ದಾಖಲಾಗುತ್ತಿದ್ದವು. ಪ್ರಸ್ತುತ ವರ್ಷಕ್ಕೆ ಸುಮಾರು 8,000 ಪ್ರಕರಣಗಳು ದಾಖಲಾಗುತ್ತಿವೆ. ಲೋಕಾಯುಕ್ತದ ಬಗ್ಗೆ ಜಾಗೃತಿ, ವಿಶ್ವಾಸ ಮೂಡಿರುವುದು ಇದಕ್ಕೆ ಕಾರಣ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

Advertisement

ಶಿಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ
ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಪ್ರಾಸಿಕ್ಯೂಷನ್‌ ಮತ್ತು ತನಿಖೆ ಎರಡೂ ವಿಭಾಗಗಳೊಂದಿಗೆ ನಿರಂತರ ಸಂವಾದ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತರಬೇತಿ ನೀಡಲಾಗುತ್ತಿದೆ. ತನಿಖೆ ವೇಳೆ ಲೋಪವಾಗದಂತೆ ನೋಡಿಕೊಳ್ಳಲು, ವಿಚಾರಣೆ ವೇಳೆ ಸಾಕ್ಷಿಗಳು ಪ್ರತಿಕೂಲವಾಗದಂತೆ ಗಮನ ಹರಿಸಲು ಅಗತ್ಯ ತರಬೇತಿ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಮುಂದಿಟ್ಟು ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಹಲವು ಅಂಶಗಳು ಕಾರಣವಾಗಿದ್ದು ಲೋಕಾಯುಕ್ತರ ಕಡೆಯಿಂದ ಆಗಬೇಕಾಗಿರುವ ಎಲ್ಲ ಅಗತ್ಯ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.

ತಪ್ಪಿತಸ್ಥರಿಗೆ ಅವಕಾಶವಿಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೋಕಾಯುಕ್ತರು, ಯಾವುದೇ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಸೇರಿಸಿಕೊಳ್ಳುವುದಿಲ್ಲ. ನೇಮಕಾತಿ ಮಾಡಿಕೊಳ್ಳುವ ಮೊದಲು ಪೂರ್ವಾ ಪರಗಳನ್ನು ಪರಿಶೀಲಿಸಲಾಗುತ್ತದೆ. ಅವರ ವಿರುದ್ಧ ತನಿಖೆ, ದಾಳಿ ಆಗಿದೆಯೇ ಎಂಬುದನ್ನು ವಿಚಾರಿ ಸಲಾಗುತ್ತದೆ. ಒಂದು ವೇಳೆ ಸರಕಾರ ಕಳುಹಿಸಿಕೊಟ್ಟ ಅಧಿಕಾರಿಗಳು ಲೋಕಾಯುಕ್ತಕ್ಕೆ ಬೇಡವೆಂದಾದರೆ ಅವರನ್ನು ವಾಪಸ್‌ ಕಳುಹಿಸುತ್ತೇವೆ ಎಂದು ಹೇಳಿದರು.

ಪಾಲಿಕೆಯಿಂದ ಮಾಹಿತಿ
ನಗರದಲ್ಲಿ ಸ್ವಚ್ಛತೆಗಾಗಿ ಕೈ ಗೊಂಡಿರುವ ಕ್ರಮಗಳ ಕುರಿತು ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮುಡಾ ಏಕ ನಿವೇಶನ ಸಮಸ್ಯೆಯ ಬಗ್ಗೆಯೂ ದೂರು ಸ್ವೀಕರಿಸಿದ್ದೇನೆ. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸ
ಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿಯಿಂದ ಕೆಲವೆಡೆ ನಿರ್ಮಿಸಿರುವ ಬಸ್‌ ನಿಲ್ದಾಣಗಳು ಅವೈಜ್ಞಾನಿಕವಾಗಿರುವ ಬಗ್ಗೆ ಓರ್ವರು ದೂರು ನೀಡಿದರು. ಉಳ್ಳಾಲ ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದಂತೆಯೂ ದೂರುಗಳನ್ನು ನೀಡಲಾಯಿತು.

ಕಟ್ಟಡ ನಿರ್ಮಾಣ ನಿಯಮ ಉಲ್ಲಂಘನೆ: ತ್ವರಿತ ಕ್ರಮಕ್ಕೆ ಸೂಚನೆ
ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಲೋಕಾ ಯುಕ್ತ ನ್ಯಾ| ಮೂ| ಬಿ.ಎಸ್‌.ಪಾಟೀಲ್‌ ಅವರು, ನಗರ ಪ್ರದೇಶಗಳಲ್ಲಿ ಸೆಟ್‌ ಬ್ಯಾಕ್‌ ಮತ್ತು ರೋಡ್‌ ಮಾರ್ಜಿನ್‌ ಬಿಡದೆ ಕಟ್ಟಡ ನಿರ್ಮಿಸುವುದರ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ತ್ವರಿತವಾಗಿ ಕ್ರಮ ಕಗೊಳ್ಳಬೇಕು. ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿದ್ದರೆ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಂಡು ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ದ.ಕ. ಜಿಲ್ಲೆಯಲ್ಲಿ 636 ಕೆರೆಗಳಿದ್ದು ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು. ತಾಲೂಕು ಕಚೇರಿಗಳಲ್ಲಿ ಸಿಬಂದಿಗಳಿಗೆ ಸಮರ್ಪಕವಾಗಿ ಕರ್ತವ್ಯ ಹಂಚಿಕೆ ಮಾಡಬೇಕು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಿಬಂದಿ ಗೌರವದಿಂದ ವರ್ತಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಸಿಇಒ ಡಾ| ಆನಂದ್‌.ಕೆ, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಸ್‌ಪಿ ಸಿ.ಬಿ ರಿಶ್ಯಂತ್‌, ಲೋಕಾಯುಕ್ತ ಎಸ್‌ಪಿ ಸಿ.ಎ ಸೈಮನ್‌, ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್‌ ಕುಮಾರ್‌, ಮಹಾನಗರಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next