Advertisement

ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ

04:17 PM Jun 24, 2021 | Team Udayavani |

ಧಾರವಾಡ: ಕೋವಿಡ್‌ ಸಂಭಾವ್ಯ ಮೂರನೇ ಅಲೆ ತಡೆ ಮತ್ತು ನಿರ್ವಹಣೆಗಾಗಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ,ಹಿರಿಯ ನಾಗರಿಕರು, ವಿಕಲಚೇತನರ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಆರೋಗ್ಯ ರಕ್ಷಣೆಗೆ, ತ್ವರಿತ ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್‌ ಸ್ಥಾಪಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಮಾನವ ಸಂಪನ್ಮೂಲ ಹಾಗೂ ವೈದ್ಯಕೀಯ ಉಪಕರಣಗಳ ಸೌಕರ್ಯ ಸಿದ್ಧವಿರಬೇಕು ಎಂದು ಸಲಹೆ ನೀಡಿದರು. ಕೋವಿಡ್‌ ಮೂರನೇ ಅಲೆಯ ತಡೆ ಮತ್ತು ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.

ಜಿಲ್ಲೆಯ ಸರ್ಕಾರಿ-ಖಾಸಗಿ ಮಕ್ಕಳ ತಜ್ಞರು ಸಮನ್ವಯದಿಂದ ಈ ಕಾರ್ಯ ಕೈಗೊಳ್ಳಲು ಸಹಕಾರ ನೀಡಬೇಕು. ಈಗಾಗಲೇ ಹಲವು ಖಾಸಗಿ ಆಸ್ಪತ್ರೆಯವರು ಮಕ್ಕಳಿಗೆ ಉಚಿತ ತಪಾಸಣೆ ಮಾಡಲು ಮುಂದೆ ಬಂದಿದ್ದಾರೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ದಾನಿಗಳು ಕೂಡ ಈ ಕಾರ್ಯದಲ್ಲಿ ಕೈಜೋಡಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಇಲಾಖೆ ಅ ಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕೊರೊನಾ ಎರಡನೇ ಅಲೆ ತೀವ್ರವಾಗಿ ಬಾಧಿಸಿದ ಪರಿಣಾಮ ಕರ್ನಾಟಕ ರಾಜ್ಯದಲ್ಲಿ 52 ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಾಲ ಸೇವಾ ಹಾಗೂ ಬಾಲಹಿತೈಷಿ ಯೋಜನೆಗಳಡಿ ಮಕ್ಕಳ ಶಿಕ್ಷಣ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ.

Advertisement

ರಾಜ್ಯದ ಪ್ರತಿಯೊಂದು ಕುಟುಂಬಗಳಿಗೂ ಇಲಾಖೆ, ಸರ್ಕಾರ ತಲುಪಲು ಸಾಧ್ಯವಾಗುತ್ತಿರುವುದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮಹತ್ವದ್ದಾಗಿದೆ.ಅವರ ಸೇವಾ ಭದ್ರತೆ, ಗೌರವ ಸಂಭಾವನೆ ಹೆಚ್ಚಳ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ ಎಂದ ಸಚಿವರು, ಜಿಲ್ಲಾಡಳಿತ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೂ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪನೆಗೆ ಕ್ರಮ ಕೈಗೊಂಡಿರುವುದು ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೇಂದ್ರ-ರಾಜ್ಯ ಸರ್ಕಾರಗಳ 60:40 ಅನುಪಾತದ ಅನುದಾನದಲ್ಲಿ ಅವರಿಗೆ ಗೌರವಧನ ನೀಡಲಾಗುತ್ತಿದೆ. ಕೋವಿಡ್‌ ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ರಾಜ್ಯದ 20 ಅಂಗನವಾಡಿ ಕಾರ್ಯಕರ್ತೆಯರ ಕುಟುಂಬಗಳಿಗೆ ತಲಾ 30 ಲಕ್ಷ ರೂ.ಪರಿಹಾರ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಪ್ರಯತ್ನದ ಫಲವಾಗಿ ಪೋಷಣ್‌ ಅಭಿಯಾನ ಅನುಷ್ಠಾನದಲ್ಲಿ ರಾಜ್ಯವು ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ ಅವರು, ಜಿಲ್ಲೆಯಲ್ಲಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಮಾಹಿತಿ ನೀಡಿದರು. ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬಯ್ಯ, ಕುಸುಮಾವತಿ ಶಿವಳ್ಳಿ, ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಡಿಸಿ ನಿತೇಶ ಕೆ. ಪಾಟೀಲ, ಜಿಪಂ ಸಿಇಒ ಡಾ|ಸುಶೀಲಾ ಬಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ,ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next