ಕಲಬುರಗಿ: ಸತ್ಯ ಶುದ್ಧವಾದ ಜೀವನ ಶ್ರೇಯಸ್ಸಿಗೆ ದಾರಿ. ಗುರಿಯಿಲ್ಲದ ಸಾಧನೆಯಿಲ್ಲದ ಜೀವನ ವ್ಯರ್ಥ ಕಷ್ಟ ಪಟ್ಟು ಶ್ರಮವಹಿಸಿ ದುಡಿದರೆ ಫಲ ಕಟ್ಟಿಟ್ಟ ಬುತ್ತಿ ಎಂದು ಬಾಳೆಹೊನ್ನೂರು ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 66ನೇ ಜನ್ಮ ದಿನೋತ್ಸವ ನಿಮಿತ್ತ ಸಂಯೋಜಿಸಿದ 3ನೇ ದಿನದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮ ಸಂಸ್ಕೃತಿ ಬಗೆಗೆ ಮಾತನಾಡುವುದು ಬಲು ಸುಲಭ. ಆದರೆ ಆಚರಣೆಯಲ್ಲಿ ತರುವುದು ಬಲು ಕಷ್ಟ. ಪ್ರಾಣ, ಯೌವನ ಮತ್ತು ಕಾಲ ಯಾರನ್ನು ಕಾಯುವುದಿಲ್ಲ. ಒಮ್ಮೆ ಕಳೆದರೆ ಮತ್ತೆಂದೂ ಮರಳಿ ಬರಲಾರದು. ಸೆ¾àಹ, ವಿದ್ಯೆ ಮತ್ತು ಸಂಬಂಧ ಬೆಳೆಸಿ ಆರೋಗ್ಯ ಪೂರ್ಣ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಜಗದ್ಗುರು ರೇಣುಕಾಚಾರ್ಯರು ಮಾನವೀಯತೆಯ ಸದ್ಗುಣ ಸಂಸ್ಕಾರ ಎಲ್ಲ ವರ್ಗದ ಜನ ಸಮುದಾಯಕ್ಕೆ ಬೋಧಿಸಿ ಬಾಳಿಗೆ ಬೆಳಕು ತೋರಿದರು ಎಂದು ವಿವರಿಸಿದರು.
ಬೆಳಗ್ಗೆ ಶ್ರೀ ಸ್ವಯಂಭು ಸೋಮೇಶ್ವರ, ವೀರಭದ್ರಸ್ವಾಮಿಗೆ ರುದ್ರಾಭಿಷೇಕ ಮತ್ತು ಶಕ್ತಿ ಮಾತಾ ಚಂಡಿಕಾಂಬಾ ಮೂರ್ತಿಗೆ ಕುಂಕುಮಾರ್ಚನೆಯನ್ನು ರಂಭಾಪುರಿ ಜಗದ್ಗುರುಗಳು ನೆರವೇರಿಸಿದರು.
ಬಿಚಗುಂದ ಮಠದ ಸೋಮಲಿಂಗ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶ್ರೀ, ಮಳಲಿಮಠದ ಡಾ| ನಾಗಭೂಷಣ ಶ್ರೀ, ಮೇಹಕರ ಹಿರೇಮಠದ ರಾಜೇಶ್ವರ ಶ್ರೀ, ಜವಳಿಮಠದ ಗಂಗಾಧರ ಸ್ವಾಮೀಜಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ದೇವಸ್ಥಾನದ ಅರ್ಚಕ ಸೋಮಯ್ಯ ಸ್ವಾಮಿ ಮತ್ತು ಗಂಗಾದರ ಸ್ವಾಮಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಪೀಠದ ಗಂಗಾಧರಸ್ವಾಮಿ ಮತ್ತು ಗದಿಗೆಯ್ಯಸ್ವಾಮಿ ರುದ್ರ ಪಠಣ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಶಿವಶರಣಪ್ಪ ಸೀರಿ, ಪ್ರಭುಲಿಂಗ ಶಾಸ್ತ್ರಿ, ಅಶೋಕ ಸಿದ್ಧಾಪುರ ಸೇರಿದಂತೆ ಇತರರಿದ್ದರು. ಕಲಬುರಗಿ ಗಿರಿಯಪ್ಪ ಮುತ್ಯಾ ಸಂಗಡಿಗರು ಅನ್ನ ದಾಸೋಹ ಸೇವೆ ಸಲ್ಲಿಸಿದರು.