ಬನಸ್ಕಾಂತ: “ವರ್ಷಗಳ ಹಿಂದೆ ಕ್ರೈಸ್ಥ ಧರ್ಮಕ್ಕೆ ಮತಾಂತರವಾದ ಬುಡಕಟ್ಟು ಸಮುದಾಯದ ಅನೇಕರು ಈಗ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಆಗುತ್ತಿದ್ದಾರೆ” ಎಂದು ಗುಜರಾತ್ ಕಾಂಗ್ರೆಸ್ ಶಾಸಕಿ ಗೆನಿಬೆನ್ ಠಾಕೂರ್ ಹೇಳಿದ್ದಾರೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಭಭಾರ್ ಗ್ರಾಮದ ವಾಲ್ಮೀಕಿ ಸಮುದಾಯದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೂ ಧರ್ಮವನ್ನು ರಕ್ಷಿಸಲು ಶ್ರಮಿಸುತ್ತಿರುವ ಧಾರ್ಮಿಕ ಗುರುಗಳು, ಬುಡಕಟ್ಟು ಜನಾಂಗದವರು ಇತರೆ ಧರ್ಮಗಳಿಗೆ ಮತಾಂತರವಾಗುವುದನ್ನು ತಡೆಯಲು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದರು. “ಗುಜರಾತ್‌ನಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರವಾದ ಬುಡಕಟ್ಟು ಸಮುದಾಯದವರು ಐಎಎಸ್, ಐಪಿಎಸ್ ಮಾತ್ರವಲ್ಲದೇ ಕಂದಾಯ ಅಧಿಕಾರಿ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಅನೇಕ ಸರ್ಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ. ಅಲ್ಲದೇ ಪರಿಶಿಷ್ಟ ಸಮುದಾಯದವರು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ’ ಎಂದು ವವ್ ವಿಧಾನಸಭಾ ಕ್ಷೇತ್ರದ ಶಾಸಕಿ ಗೆನಿಬೆನ್ ಹೇಳಿದ್ದಾರೆ.