ಎಚ್.ಡಿ.ಕೋಟೆ: ಸರ್ಕಾರಿ ಕಚೇರಿ ಮತ್ತು ನ್ಯಾಯಾಲಯಗಳಲ್ಲೇ ಸ್ವತ್ಛತೆ ಕಾಪಾಡಿಕೊಳ್ಳಲಿಲ್ಲ ಎಂದರೆ ನಾವು ಬೇರೆಯವರಿಗೆ ಸ್ವತ್ಛತೆ ಕಾಪಾಡಿ ಎಂದು ಹೇಳುವುದು ಸೂಕ್ತವಲ್ಲ, ಹೀಗಾಗಿ ಗಾಂಧೀಜಿ ನುಡಿಯಂತೆ ಮೊದಲು ನಮ್ಮ ಮನೆಯಿಂದಲೇ ಶ್ರಮದಾನ ಮಾಡಬೇಕೆಂದು ಪಟ್ಟಣ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಾಲಯ ಸೇರಿದಂತೆ ಸರ್ಕಾರಿ ಕಚೇರಿ ಆವರಣಗಳು ಸ್ವತ್ಛವಾಗಿದ್ದರೇ ಮಾತ್ರ ಪರಿಸರ ಸ್ವತ್ಛವಾಗಿರುತ್ತೆ. ಸರ್ಕಾರಿ ಕಚೇರಿಗೆ ಜನರು ಶುದ್ಧ ಮನಸ್ಸಿನಿಂದ ಬರುತ್ತಾರೆ, ಇಲ್ಲಿ ಪರಿಸರ ಉತ್ತಮವಾಗಿದ್ದರೆ ಕಚೇರಿಗಳಿಗೆ ಬರಲು ಉತ್ಸಾಹ ಬರುತ್ತದೆ ಎಂದು ಹೇಳಿದರು.
ನ್ಯಾಯಾಲಯ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಚೇರಿ ಮತ್ತು ನ್ಯಾಯಾಲಯ ಆವರಣ ಹಾಗೂ ಸುತ್ತಮುತ್ತ ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಜಿಲ್ಲಾ ನ್ಯಾಯಧೀಶರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸ್ವತ್ಛತೆ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆಂದರು.
ಇಂದು ಪಟ್ಟಣ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಶ್ರಮದಾನ ಕೈಗೊಂಡಿದ್ದು ಈ ಮಹತ್ವದ ಬೆಳವಣಿಗೆಯಿಂದಾಗಿ ನ್ಯಾಯಾಲಯ ಸೇರಿದಂತೆ ಸರ್ಕಾರಿ ಕಚೇರಿ ಸುತ್ತಮುತ್ತ ಪರಿಸರ ಸ್ವತ್ಛತೆ ಕಾಣಲು ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು. ಈ ಎಲ್ಲಾ ಕಾರಣದಿಂದ ಶ್ರಮದಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ತಾನು ಸಾಂಕೇತಿಕವಾಗಿ ಸ್ವತ್ಛತೆ ಕೈಗೊಂಡಿದ್ದು ಮುಂದೆಯೂ ತಿಂಗಳಲ್ಲಿ ಒಂದು ದಿನ ಶ್ರಮದಾನ ಕೈಗೊಳ್ಳಲಾಗುವುದು ಎಂದರು.
ಗಾಂಧಿ ಜಯಂತಿ ಅಂಗವಾಗಿ ನ್ಯಾಯಾಲಯ ಆವರಣದಲ್ಲಿ ಸಂಕೇತಿಕವಾಗಿ ನಡೆದ ಶ್ರಮದಾನದಲ್ಲಿ ಪಟ್ಟಣ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸರ್ಪರಾಜ್ ಹುಸೇನ್ ಕಿತ್ತೂರು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೇಶವ, ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲ ಡಿ.ಆರ್.ಮಹೇಶ್ ಮತ್ತಿತರರಿದ್ದರು.
ಶ್ರಮದಾನದಿಂದ ಆರೋಗ್ಯ, ನೆಮ್ಮದಿ
ಸ್ವತ್ಛತೆ ಅಂದರೆ ನಮ್ಮ ಅಂಗಳ ಶುದ್ಧ ಮಾಡಿಕೊಂಡು ಅಕ್ಕಪಕ್ಕದವರ ಅಂಗಳ ಕೇಡಿಸುವುದಲ್ಲ. ನಮ್ಮ ಅಂಗಳವೂ ಸ್ವತ್ಛ ಆಗಬೇಕು. ಬೇರೆಯವರ ಅಂಗಳವೂ ಸ್ವತ್ಛ ಆಗಬೇಕು. ಹೀಗಾದರೆ ಉತ್ತಮ ಪರಿಸರ ನಿರ್ಮಾಣವಾಗುವುದರ ಜತೆಗೆ ಶ್ರಮದಾನ ಮಾಡಿದ್ದರಿಂದ ನೆಮ್ಮದಿ ಸಿಗುತ್ತದೆ.
-ಸರ್ಪರಾಜ್ ಹುಸೇನ್ ಕಿತ್ತೂರು, ಸಿವಿಲ್ ನ್ಯಾಯಾಧೀಶರು