ಆಫೀಸಿನ ಅಷ್ಟೂ ಮಂದಿಗೆ, “ವರ್ಕ್ ಫ್ರಂ ಹೋಮ್ ಮಾಡಿ, ಸಂಜೆ 6 ಗಂಟೆಯಷ್ಟೊಟ್ಟಿಗೆ ದಿನದ ಫೈಲ್‌ಗಳನ್ನು ಮೇಲ್ ಮಾಡಿ’ ಅಂತ್ಹೇಳಿ ಬಂದಿದ್ದೆ. ಸಹೋದ್ಯೋಗಿಗಳಿಗೆ ಮನೆಕೆಲಸ ಕೊಟ್ಟಾಗ, ನನ್ನಂಥ ಬಾಸ್‌ಗೂ ಸ್ವಲ್ಪ ಜಾಸ್ತಿಯೇ ಕೆಲಸ, ಟೆನ್ಶನ್, ಎರಡೂ ಇರುತ್ತೆ. ಎಲ್ಲಿ? ಏನಾಯ್ತು?- ಅಂತ ನೋಡಲು ಸಿಸಿ ಟಿವಿ ಇರೋಲ್ಲ. ಇನ್ನೊಬ್ಬನ ಡೆಸ್ಕ್ಟಾಪ್‌ನಲ್ಲಿ ಏನಾಗ್ತಿದೆ ಅಂತ ಚೆಕ್ ಮಾಡೋಕೂ ಆಗೋದಿಲ್ಲ.
ಬಾಸ್ ಇದ್ದಾಗ ಆಗುವ ಕೆಲಸದ ವೇಗಕ್ಕೂ, ಇಲ್ಲದಿದ್ದಾಗ ಆಗುವ ಕೆಲಸದ ಸ್ಪೀಡ್‌ಗೂ ಬಹಳ ವ್ಯತ್ಯಾಸಗಳುಂಟು. ಆದರೆ, ಕೊರೊನಾದ ಭಯದಿಂದ ಅನಿವಾರ್ಯವಾಗಿ ರಜೆಯೇನೋ ಕೊಟ್ಟೆ. ಮರುದಿನ ಬೆಳಗ್ಗೆ ಎದ್ದಾಗ, ಮನೆಗೆಲಸದ ಸಂಜೀವಮ್ಮ ಬಂದರು. ನಾನು ಲ್ಯಾಪ್‌ಟಾಪ್ ಹಿಡಿದು, ಪ್ರೋಗ್ರಾಮ್‌ಗಳ ವಿಡಿಯೋ ನೋಡ್ತಾ ಇರೋದನ್ನೆಲ್ಲ ಅವಳು ಗಮನಿಸಿದ್ದಳು.
ಅಷ್ಟರಲ್ಲಾಗಲೇ ಅವಳು ನಮ್ಮ ಮನೆಯ ಹತ್ತಾರು ಕೆಲಸ ಮುಗಿಸಿದ್ದಾಯ್ತು. ಹೋಗುವಾಗ ನನ್ನ ಹೆಂಡ್ತಿಗೆ ಕೇಳಿದಳು. “ಅಮ್ಮಾವ್ರೆ, ಯಾಕೆ ಯಜಮಾನ್ರು ಮನೇಲೆ ಕುಂತವ್ರೆ?’. “ಅವರದ್ದು ಇವತ್ತಿಂದ ಹತ್ತು ದಿನ ವರ್ಕ್ ಫ್ರಮ್ ಹೋಮ್. ಅಂದ್ರೆ, ಮನೆಯಿಂದಲೇ ಕೆಲಸ ಮಾಡೋದು’ ಅಂದಳು, ಹೆಂಡ್ತಿ.
“ಹೌದಾ, ಅಮ್ಮಾವ್ರೆ… ಹಾಗಾದ್ರೆ ನಾನೂ ವರ್ಕ್ ಫ್ರಂ ಹೋಮ್ ಮಾಡ್ತೀನ್ರೀ. ನಂಗೂ ಕೊರೊನಾ ಬಂದ್ರೆ ಕಷ್ಟ’ ಅಂತ್ಹೇಳಿ ಹೋದವಳು, ಮತ್ತೆ ಮನೆಕಡೆ ಬರಲೇ ಇಲ್ಲ. ಇವತ್ತಿಗೆ ನನ್ನ ವರ್ಕ್ ಫ್ರಮ್ ಹೋಂ, ನಾಲ್ಕನೇ ದಿನ. ಸಂಜೀವಮ್ಮ ಮಾಡಬೇಕಾದ ಕೆಲಸ, ನನ್ನ ಪಾಲಿಗೆ ಬಂದಿದೆ. ನಮ್ಮನೇಲಿ ಇಷ್ಟು ಪಾತ್ರೆಗಳಿವೆ ಅಂತ ನನಗೆ ಗೊತ್ತಾಗಿದ್ದೇ ಈಗ.
* ಶರತ್ ಪಿ.ಎಚ್., ಖಾಸಗಿ ಕಂಪನಿಯ ಮ್ಯಾನೇಜರ್