ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆರಂಭಿಸಲಾಗಿದ್ದ ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ವ್ಯವಸ್ಥೆಗೆ ಈಗ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಅಂತ್ಯಹಾಡಿದೆ.
ತನ್ನ ಉದ್ಯೋಗಿಗಳು ವಾರಕ್ಕೆ ಕನಿಷ್ಠ 3 ದಿನಾವದರೂ ಕಚೇರಿಗೆ ಬಂದೇ ಕೆಲಸ ಮಾಡಬೇಕು ಎಂದು ಸೂಚಿಸಿದೆ.
ಐಟಿ ಕಂಪನಿಗಳಲ್ಲಿ ಮೂನ್‌ಲೈಟಿಂಗ್ (ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಲೇ, ಬೇರೆ ಕಂಪನಿಗಳ ಪ್ರಾಜೆಕ್ಟ್ ವಹಿಸಿಕೊಳ್ಳುವುದು) ಕುರಿತು ಭಾರೀ ಸುದ್ದಿಯಾಗುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ತನ್ನ ಉದ್ಯೋಗಿಗಳಿಗೆ ಈ ಕುರಿತು ಇಮೇಲ್ ರವಾನಿಸಿರುವ ಟಿಸಿಎಸ್ ಕಂಪನಿ, “ಈಗಾಗಲೇ ಹಿರಿಯ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಲಾರಂಭಿಸಿದ್ದಾರೆ. ಕೆಲವು ಗ್ರಾಹಕರು ಕೂಡ ನೇರವಾಗಿ ಟಿಸಿಎಸ್ ಕಚೇರಿಗೆ ಬರುತ್ತಿದ್ದಾರೆ.
ಹೀಗಾಗಿ, ಎಲ್ಲ ಉದ್ಯೋಗಿಗಳೂ ವಾರಕ್ಕೆ ಕನಿಷ್ಠ 3 ದಿನ ಕಚೇರಿಗೆ ಹಾಜರಾಗಬೇಕು. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಮತ್ತು ಎಲ್ಲರ ಹಾಜರಾತಿಯನ್ನೂ ಟ್ರ್ಯಾಕ್ ಮಾಡಲಾಗುತ್ತದೆ. ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸೂಚಿಸಿದೆ.