Advertisement

ಕೆಲಸ -ಕುಟುಂಬ ಆಯ್ಕೆಯಲ್ಲ, ಹೊಣೆಗಾರಿಕೆ…

07:05 PM Jan 07, 2020 | mahesh |

ರಾಧಿಕಾಗೆ ಹೊರದೇಶದಲ್ಲಿನ ಕೆಲಸ, ಆಫೀಸಿನಲ್ಲಿ ಜನರ ನಡೆ-ನುಡಿ ಮತ್ತು ಆ ದೇಶದ ಸಾಮಾಜಿಕ ವಾತಾವರಣ ಬಹಳಷ್ಟು ಹಿಡಿಸಿದೆ. “ಯಾವುದೇ ಕಾರಣಕ್ಕೂ ಭಾರತಕ್ಕೆ ಹಿಂತಿರುಗುವುದಿಲ್ಲ, ಪತಿಯೇ ಅಲ್ಲಿಗೆ ಕೆಲಸ ಹುಡುಕಿಕೊಂಡು ಬರಲಿ’ ಎಂದು ರಾಧಿಕಾ ಮನಸ್ಸಿನಲ್ಲಿ ನಿರ್ಧರಿಸಿದ್ದಳು. ಆದರೆ, ಆ ನಿರ್ಧಾರದಿಂದಾಗಿ ಕುಟುಂಬದ ತೀವ್ರ ವಿರೋಧ ಎದುರಿಸಬೇಕಾಯ್ತು…

Advertisement

ರಾಧಿಕಾಗೆ ಮದುವೆಯಾಗಿ ಆರು ವರ್ಷಗಳಾಗಿವೆ. ಮೂರು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಹೊರದೇಶಕ್ಕೆ ಹೋದವಳು, ವಾಪಸ್ಸು ಬರಲು ಹಿಂಜರಿಯುತ್ತಿದ್ದಾಳೆ. ಆಕೆಯ ಪತಿ ರಾಕೇಶ್‌, ಭಾರತದಲ್ಲಿಯೇ ಕೆಲಸದಲ್ಲಿದ್ದಾರೆ. ಗಂಡ ಬಹಳ ಒಳ್ಳೆಯವರೆಂದು ರಾಧಿಕಾಗೆ ಗೊತ್ತು. ಆದರೂ ಆಕೆಗೆ ಹೊರದೇಶದಲ್ಲಿನ ಕೆಲಸ, ಆಫೀಸಿನಲ್ಲಿ ಜನರ ನಡೆ-ನುಡಿ ಮತ್ತು ಆ ದೇಶದ ಸಾಮಾಜಿಕ ವಾತಾವರಣ ಬಹಳಷ್ಟು ಹಿಡಿಸಿದೆ. “ಯಾವುದೇ ಕಾರಣಕ್ಕೂ ಭಾರತಕ್ಕೆ ಹಿಂತಿರುಗುವುದಿಲ್ಲ, ಪತಿಯೇ ಅಲ್ಲಿಗೆ ಕೆಲಸ ಹುಡುಕಿಕೊಂಡು ಬರಲಿ’ ಎಂದು ರಾಧಿಕಾ ಮನಸ್ಸಿನಲ್ಲಿ ನಿರ್ಧರಿಸಿದ್ದಳು. ಪತಿ ರಾಕೇಶ್‌ಗೂ, ಪತ್ನಿ ಹೊರದೇಶದಲ್ಲಿರುವುದರ ಬಗ್ಗೆ ತಕರಾರಿಲ್ಲ. ಅವರೂ ವಿದೇಶದಲ್ಲಿ ಕೆಲಸ ಹುಡುಕುತ್ತಿದ್ದಾರೆ. ಆದರೆ, ಅವರಿಗೆ ತಕ್ಕುದಾದ ಉದ್ಯೋಗಾವಕಾಶ ಇನ್ನೂ ಒದಗಿ ಬಂದಿಲ್ಲ.

ರಾಧಿಕಾರ ತಂದೆ-ತಾಯಿಗೆ ಮಗಳ ನಿರ್ಧಾರ ಇಷ್ಟವಿಲ್ಲ. ಮಗಳಿಗೆ ವಾಪಸ್ಸು ಬರಲು ಒತ್ತಾಯ ಮಾಡುತ್ತಿ¨ªಾರೆ. ಅದರಿಂದ ಕುಪಿತಗೊಂಡ ರಾಧಿಕಾ, ಅಪ್ಪ-ಅಮ್ಮನ ಜೊತೆ ಮಾತು ಬಿಟ್ಟಿದ್ದಾಳೆ. ಅವರೊಂದಿಗೆ ಮಾತನಾಡಬೇಕು ಅನ್ನಿಸಿದರೂ, ಅವರು ಸಾಂಸಾರಿಕ ಜೀವನದ ಬಗ್ಗೆ ಕೊಡುವ ಬುದ್ಧಿಮಾತುಗಳು ಆಕೆಗೆ ಇಷ್ಟವಾಗುತ್ತಿಲ್ಲ. ರಾಧಿಕಾಳ ಮಾವನವರಂತೂ ಕೋಪಕೊಂಡು, “ಮಕ್ಕಳು ಯಾವ ಕಾಲಕ್ಕೆ ಹುಟ್ಟುವುದು?’ ಎಂದು ಪ್ರಶ್ನೆ ಮಾಡಿದಾಗ, “ಮಕ್ಕಳು-ಸಂಸಾರ ಎನ್ನುವುದು ವೈಯಕ್ತಿಕ ವಿಚಾರ. ಬೇರೆಯವರು ಅದರಲ್ಲಿ ತಲೆ ಹಾಕಬಾರದು’ ಎಂದು ಖಡಕ್‌ ಉತ್ತರ ನೀಡಿ, ಮಾವನೊಂದಿಗೂ ಮಾತು ಬಿಟ್ಟಿದ್ದಾಳೆ. ಮಾವನವರು ರಾಧಿಕಾಳ ಉದ್ಧಟತನದ ಮಾತಿಗೆ ರಾಕೇಶ್‌ನ ಸಲುಗೆಯೇ ಕಾರಣವೆಂದು, ಮಗನಿಗೆ ಬೈದು, ರಾಧಿಕಾಳನ್ನು ವಾಪಸ್‌ ಕರೆಸಲು ಆದೇಶ ನೀಡಿದ್ದಾರೆ.

ಈ ವಿಚಾರವಾಗಿ, ಕಳೆದ ತಿಂಗಳು ರಾಕೇಶ್‌ ಹೆಂಡತಿಯೊಂದಿಗೆ ಮಾತನಾಡಿವಾಗ, ರಾಕೇಶ್‌ ಕೆಲಸ ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ, ಈ ರೀತಿಯ ಸಮಸ್ಯೆಗಳು ಬರುತ್ತಿರಲಿಲ್ಲ ಎಂದು ಪತಿಯೊಡನೆಯೂ ಆಕೆ ಜಗಳವಾಡಿದ್ದಾಳೆ. ರಾಕೇಶ್‌ ಕೂಡಾ ಕೋಪದಿಂದ ತಿರುಗುತ್ತರ ನೀಡಿದ್ದರಿಂದ, ಆಕೆಗೆ ಒಂಟಿತನ ಕಾಡಲು ಆರಂಭಿಸಿದೆ. ಉದ್ಯೋಗದಲ್ಲಿ ಹೆಸರು-ಹಣ ಗಳಿಸಿದ್ದರೂ, ರಾಧಿಕಾಗೆ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಕಡೆಗೆ ರಾಧಿಕಾ ಸ್ವಲ್ಪ ದಿನ ರಜೆ ಹಾಕಿ, ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕೆಂದು ಭಾರತಕ್ಕೆ ಬಂದಳು.

ಸದ್ಯದ ಪರಿಸ್ಥಿತಿಯಲ್ಲಿ ಅದೇ ಸಂಸ್ಥೆಯಲ್ಲಿ, ಅದೇ ಸಂಬಳಕ್ಕೆ, ರಾಧಿಕಾಗೆ ಭಾರತದಲ್ಲೂ ಕೆಲಸ ಮಾಡುವ ಅವಕಾಶವಿತ್ತು. ಆದರೆ ಅದನ್ನು ಮರೆತು, ವಿದೇಶದ ವ್ಯಾಮೋಹದಿಂದ ಅಲ್ಲಿಯೇ ಇರುತ್ತೇನೆಂದು ತಾನು ಹಟ ಹಿಡಿದಿರುವುದನ್ನು ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಆಕೆ ಮನಗಂಡಳು. ಸಂಸಾರ ಮತ್ತು ವೃತ್ತಿ ಜೀವನದ ನಡುವೆ ಆಯ್ಕೆಗಿಂತ, ಎರಡನ್ನೂ ಸಮನಾಗಿ ನಿಭಾಯಿಸುವ ನೈತಿಕ ಹೊಣೆಗಾರಿಕೆಯ ಪಾತ್ರ ಜಾಸ್ತಿ ಇರುತ್ತದೆ. ಎರಡನ್ನೂ ಹೇಗೆ ನಿಭಾಯಿಸಬೇಕು ಎಂಬು ಚತುರತೆಯನ್ನು ಕೌನ್ಸೆಲಿಂಗ್‌ನಲ್ಲಿ ಅರಿತಳು.

Advertisement

ವಾಸ್ತವದಲ್ಲಿ, ರಾಕೇಶ್‌ಗೆ ಕುಟುಂಬದವರು ಏನೂ ಹೇಳುವುದಿಲ್ಲ. ಆದರೆ, ಹೆಣ್ಣು ಮಕ್ಕಳೇ ಪ್ರತಿಯೊಂದಕ್ಕೂ ಯಾಕೆ ರಾಜಿಯಾಗಬೇಕು ಎಂದು ರಾಧಿಕಾ ಸಿಟ್ಟಾಗಿದ್ದಳು. ಹೆಣ್ಣಿನಲ್ಲಿ ಸಂತಾನೋತ್ಪತ್ತಿಗೆ ವಯಸ್ಸಿನ ಪ್ರಕೃತಿ ಸಹಜ ಗಡುವು ಇರುವುದರಿಂದ ಅವಳ ಮೇಲೆಯೇ ಹೆಚ್ಚು ಒತ್ತಡ ಬೀಳುವುದೆಂದು ಅರಿವಾದ ನಂತರ, ರಾಧಿಕಾ ಭಾರತಕ್ಕೆ ವಾಪಸ್‌ ಬರಲು ನಿರ್ಧರಿಸಿದ್ದಾಳೆ. ರಾಕೇಶ್‌ ಜೊತೆಗೆ ದೊಡ್ಡವರೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ, ರಾಧಿಕಾಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.

ಒತ್ತಡಗಳು ಏನೇ ಇದ್ದರೂ, ವಾಸ್ತವವನ್ನು ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡರೆ, ಕುಟುಂಬ ಮತ್ತು ಉದ್ಯೋಗ, ಎರಡನ್ನೂ ನಿಭಾಯಿಸಿಕೊಂಡು ಹೋಗಬಹುದು.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next