Advertisement

ಕಾಯಕದಲ್ಲಿ ದೇವರನ್ನು ಕಾಣು..!

05:11 PM Jul 18, 2021 | Team Udayavani |

ದೇವರನ್ನು ಇಲ್ಲಿಯವರೆಗೆ ಯಾರು ನೋಡಿಲ್ಲ. ಆದರೂ ದೇವರಿದ್ದಾನೆ ಎಂಬ ನಂಬಿಕೆಯಲ್ಲಿಯೇ ಮನುಷ್ಯ ಇನ್ನೂ ತನ್ನ ಜೀವನ ನಡೆಸುತ್ತಿದ್ದಾನೆ. ದೇವರು ಇದ್ದಾನೆ ಎನ್ನುವ ಆಸ್ತಿಕರಿದ್ದಾರೆ. ಹಾಗೆ ದೇವರಿಲ್ಲ ಎಂದು ಹೇಳುವ ನಾಸ್ತಿಕರೂ ಇದ್ದಾರೆ.

Advertisement

ಈ ಭೂಮಿ ಮೇಲೆ ನಾವಿರುವುದು ಎಷ್ಟು ಸತ್ಯವೋ ದೇವರು ಇರುವುದು ಅಷ್ಟೇ ಸತ್ಯ ಎಂದು ಆಸ್ತಿಕ ಮತ್ತು ದೇವರು ಇರುವುದು ಸುಳ್ಳು ಎಂದು ನಾಸ್ತಿಕ ಇವರಿಬ್ಬರ ಮದ್ಯ ವಾಗ್ವಾದ ಏರ್ಪಟಿತ್ತು. ಹೀಗಿರಬೇಕಾದರೆ ಒಂದು ದಿನ ಆಸ್ತಿಕ ಭಗವಾನ್‌ ಬುದ್ಧರನ್ನು ಭೇಟಿಯಾಗಿ ದೇವರು ಇದ್ದಾನೆ ಅಲ್ಲವೇ ಎಂದು ಕೇಳುತ್ತಾನೆ ಆಗ ಬುದ್ಧ ಹೌದು ದೇವರು ಇರುವುದು ನಿಜ ಎಂದು ಹೇಳುತ್ತಾರೆ. ಆಗ ಆಸ್ತಿಕ ಖುಷಿಯಿಂದ ಹೊರಡುತ್ತಾನೆ. ಬುದ್ಧರನ್ನು ಭೇಟಿ ಮಾಡಿದ ಮತ್ತು ಅಲ್ಲಿ ನಡೆದ ಸಂಗತಿಯನ್ನು ನಾಸ್ತಿಕನಿಗೆ ವಿವರಿಸುತ್ತಾನೆ.  ನಾಸ್ತಿಕನೂ ಸಹ ಭಗವಾನ್‌ ಬುದ್ಧರನ್ನು ಭೇಟಿ ಮಾಡಿ ದೇವರು ಇಲ್ಲವಲ್ಲ ಎಂದು ಪ್ರಶ್ನಿಸುತ್ತಾನೆ. ಆಗ ಬುದ್ಧರು ದೇವರಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಅವನು ಸಹ ಖುಷಿಯಿಂದ ಬಂದು ಬುದ್ಧನನ್ನು ಭೇಟಿ ಮಾಡಿದ ಹಾಗೂ ದೇವರಿಲ್ಲ ಎಂಬ ಸಂಗತಿಯನ್ನು ಆಸ್ತಿಕನಿಗೆ ಹೇಳುತ್ತಾನೆ. ಇವರಿಬ್ಬರ ಮಧ್ಯೆ ನಡೆದ ವಾಗ್ವಾದವನ್ನು ಗಮನಿಸಿದ ಮೂರನೇ ವ್ಯಕ್ತಿ ದೇವರು ಇದ್ದಾನೋ ಇಲ್ಲವೋ ಎಂಬ ಸತ್ಯ ತಿಳಿಯಲು ಅವನು ಸಹ ಬುದ್ಧನನ್ನು ಭೇಟಿ ಮಾಡುತ್ತಾನೆ. ದೇವರು ಇದ್ದಾನೋ ಇಲ್ಲವೋ ಎಂದು ಕೇಳುತ್ತಾನೆ. ಆಗ ಬುದ್ಧ ದೇವರು ಇದ್ದಾನೆ ಎಂದರೆ ಇರುವನು, ದೇವರು ಇಲ್ಲ ಎಂದರೆ ಇಲ್ಲ ಎಂದು ಹೇಳುತ್ತಾನೆ.

ಆಗ ಅಲ್ಲಿದ್ದ ಬುದ್ಧನ ಶಿಷ್ಯರು ಗುರುಗಳೇ ಮೊದಲಿಗೆ ಬಂದವನಿಗೆ ದೇವರಿದ್ದಾನೆ ಹಾಗೂ ಎರಡನೆಯವನಿಗೆ ದೇವರಿಲ್ಲ ಎಂದು ಅಷ್ಟೇ ಅಲ್ಲದೆ ಕೊನೆಯವನಿಗೆ ದೇವರು ಇರುವನು ಮತ್ತು ಇಲ್ಲ ಎಂದು ಹೇಳಿದಿರಲ್ಲ ಏಕೆ ಎಂದು ಪ್ರಶ್ನಿಸಿದರು. ಬುದ್ಧನ ಉತ್ತರ ಹೀಗಿತ್ತು.  ಆಸ್ತಿಕನ ನಂಬಿಕೆ ನೂರಕ್ಕೆ ನೂರರಷ್ಟು ದೇವರು ಇರುವುದು ನಿಜ ಎಂದು ತಿಳಿದುಕೊಂಡು ಬಂದಿದ್ದ. ಹಾಗೆ ನಾಸ್ತಿಕನು ಸಹ ದೇವರು ಇಲ್ಲ ಎಂದುಕೊಂಡು ಬಂದಿದ್ದ. ಆದರೆ ಕೊನೆಗೆ ಬಂದವನ ಮನಸ್ಸಿನಲ್ಲಿ ದೇವರು ಇದ್ದಾನೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಬಂದಿದ್ದ. ಯಾರಲ್ಲಿ ದೇವರು ಇದ್ದಾನೆ ಎಂಬ ನಂಬಿಕೆ ಇದೆಯೋ ಅವರಿಗೆ ದೇವರು ಇರುವುದು ನಿಜ. ಹಾಗೇ ಇಲ್ಲ ಎನ್ನುವವರಿಗೆ ದೇವರು ಇಲ್ಲ.

ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆ ಮಾಡುವುದಕ್ಕಿಂತ ನಮ್ಮನಮ್ಮ ಕಾಯಕದಲ್ಲಿ ದೇವರನ್ನು ಕಾಣುವುದು ಸೂಕ್ತ. ಬಸವಣ್ಣನವರು 12ನೇ ಶತಮಾನದಲ್ಲೇ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ, ಪ್ರಮಾಣಿಕತೆ, ನಂಬಿಕೆ ಇರಬೇಕು. ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳು  ದೇವರನ್ನು ಪರಿಚಯಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

 

Advertisement

ನವೀನ್‌ ಕತ್ತಿ

ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next