Advertisement

ಗುಂಡ್ರಿ ಕಾಲುಸಂಕದಲ್ಲಿ ವಿದ್ಯಾರ್ಥಿಗಳ ಸರ್ಕಸ್‌  

03:27 PM Jul 09, 2023 | Team Udayavani |

ಸಿದ್ದಾಪುರ: ಅಮಾಸೆಬೈಲು ಗ್ರಾಮ ಪಂಚಾಯತ್‌ನ ಅನತಿ ದೂರದಲ್ಲಿರುವ ಮಂಡಾಡಿಯ ಗುಂಡ್ರಿ ಎಂಬಲ್ಲಿ ತೋಡಿಗೆ ಮರದಿಂದ ನಿರ್ಮಿಸಲಾದ ಕಾಲು ಸಂಕದಲ್ಲಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಜನಸಾಮಾನ್ಯರ ನಿತ್ಯದ ಸರ್ಕಸ್‌ ಆಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕಾಲು ಸಂಕದಲ್ಲಿ ವಿದ್ಯಾರ್ಥಿಗಳು, ಜನಸಾಮಾನ್ಯರು ತಿರುಗುತ್ತಿದ್ದರೂ ಅಮಾಸೆಬೈಲು ಗ್ರಾ.ಪಂ. ಮಾತ್ರ ಯಾವುದೇ ರೀತಿಯ ಕ್ರಮದ ಬಗ್ಗೆ ಚಿಂತನೆ ಇಲ್ಲದಂತಾಗಿದೆ.

Advertisement

ಅಮಾಸೆಬೈಲು, ಮಂಡಾಡಿ, ರಟ್ಟಾಡಿ ಮತ್ತು ಮಚ್ಚಟ್ಟು ಗ್ರಾಮಕ್ಕೆ ಸಂಪರ್ಕಿಸಲು ಗುಂಡ್ರಿ ಕಾಲುದಾರಿ ಹತ್ತಿರದ ದಾರಿಯಾಗಿದೆ. ಹಲವಾರು ವರ್ಷಗಳಿಂದ ಈ ಭಾಗದ ಜನರು ಈ ಕಾಲುದಾರಿ ಮತ್ತು ಗುಂಡ್ರಿ ಕಾಲುಸಂಕವನ್ನು ನಂಬಿಕೊಂಡಿದ್ದಾರೆ. ಗುಂಡ್ರಿ ಕಾಲುಸಂಕವನ್ನು ಸುಮಾರು 60 ಮನೆಯವರು ಆಶ್ರಯಿಸಿದ್ದಾರೆ. ಕಾಲುಸಂಕದ ಮೇಲೆ ಸುಮಾರು 30 ವಿದ್ಯಾರ್ಥಿಗಳು ವಿವಿಧ ಕಡೆಗಳ ಶಾಲೆಗಳಿಗೆ ತೆರಳುತ್ತಾರೆ. ಅನೇಕ ಕೂಲಿ ಕಾರ್ಮಿಕರು, ಮಹಿಳೆಯರು, ಮಕ್ಕಳು ಈ ಕಾಲುಸಂಕದ ಮೂಲಕ ತೆರಳುತ್ತಾರೆ. ಇಷ್ಟೊಂದು ಜನರಿಗೆ ಅನುಕೂಲಕರವಾಗಿರುವ ಕಾಲು ಸಂಕದ ಬದಲಾಗಿ ಸಣ್ಣ ಪುಟ್‌ಬ್ರಿಜ್‌ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಅಮಾಸೆಬೈಲು
ಗ್ರಾ.ಪಂ.ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಅಮಾಸೆಬೈಲು ಪೇಟೆಯಿಂದ ಸೇರಿದಂತೆ ಮಂಡಾಡಿ ಪರಿಸರದ ನೀರು ಈ ಗುಡ್ರಿ ತೋಡಿನ ಮೂಲಕ ಹರಿದು ಮುಂದೆ ಹೊಳೆಗೆ ಸೇರುತ್ತದೆ. ಜೋರಾಗಿ ಮಳೆ ಬಂದಾಗ ಪ್ರವಾಹವೇ ಹರಿದು ಬರುತ್ತದೆ. ಇದರಿಂದ ಇನ್ನೂ ಅನಾಹುತ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಮಳೆಯ ನೀರಿಗೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಅನಾಹುತ ಸಂಭವಿಸಿದ್ದಾಗ ಸ್ಥಳೀಯಾಡಳಿತ, ಜಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಬಂದು ಸಾಂತ್ವನ ಹೇಳುವ ಮೊದಲು ಇತಂಹ ಸಣ್ಣಪುಟ್ಟ ಕಾಲುಸಂಕಕಳಿಗೆ ಶಾಶ್ವತ ಪರಿಹಾರ ನೀಡಬಹುದಾಗಿದೆ. ಗ್ರಾ.ಪಂ. ಅನುದಾನದಲ್ಲಿ ಕಾಲುಸಂಕ ನಿರ್ಮಿಸಲು ಹಣ ಇಲ್ಲದಿದ್ದಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಮೂಲಕ ಕಾಲುಸಂಕ ನಿರ್ಮಿಸಿಕೊಳ್ಳಲು ಅವಕಾಶ ಇದೆ. ಇದರ ಬಗ್ಗೆಯೂ ಮನಸ್ಸು ಮಾಡುತ್ತಿಲ್ಲ ಗ್ರಾ.ಪಂ. ಆಡಳಿತ ಎನ್ನುತ್ತಾರೆ ಗ್ರಾಮಸ್ಥರು.

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೇಕ ಸಣ್ಣಪುಟ್ಟ ಕಾಲು ಸಂಕದ ಬೇಡಿಕೆಗಳು ಇದ್ದರೂ, ಅದನ್ನು ನಿರ್ಮಿಸಿಕೊಡುವಲ್ಲಿ ಸ್ಥಳೀಯಾಡಳಿತಕ್ಕೆ ಕಾಳಜಿ ಇದ್ದಂತಿಲ್ಲ. ಉದ್ಯೋಗಖಾತ್ರಿಯಂತಹ ಯೋಜನೆಗಳು ಇದ್ದರೂ, ಅದರ ಮೂಲಕ ಜನರ ಅಗತ್ಯತೆಯ ಇಂತಹ ಕಾಮಗಾರಿ ಮಾಡಲು ಉತ್ತೇಜನ ನೀಡಬೇಕು ಎನ್ನುವುದು ಕೂಡ ಗ್ರಾಮದ ಜನರ ಬೇಡಿಕೆಯಾಗಿದೆ.

ಸೂಕ್ತ ಕ್ರಮ ಕೈಗೊಳ್ಳಿ
ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಮತ್ತು ವೃದ್ಧರಿಗೆ ಮರದ ಕಾಲುಸಂಕದಲ್ಲಿ ತಿರುಗಾಡಲು ತೊಂದರೆಯಾಗುತ್ತಿದೆ. ಗುಂಡ್ರಿಯಲ್ಲಿ ಒಂದು ಸುಸಜ್ಜಿತವಾದ ಕಾಲುಸಂಕ ನಿರ್ಮಿಸಿ ಕೊಡುವಂತೆ ಅಮಾಸೆಬೈಲು ಗ್ರಾ.ಪಂ.ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈಗ ಮಳೆ ಬಂದು ವ್ರವಾಹ ಬರುತ್ತಿದೆ. ಇದರ ಬಗ್ಗೆ ಸ್ಥಳೀಯಾಡಳಿತ ಕೂಡಲೇ ಸೂಕ್ತ ಕ್ರಮತೆಗೆದುಕೊಳ್ಳಬೇಕು.
 -ಶಾರದಾ ಮಂಡಾಡಿ
ಸ್ಥಳೀಯ ಮಹಿಳೆ

Advertisement

ಜಾಗ ಸಿಕ್ಕರೆ ನಿರ್ಮಾಣ
ಗುಂಡ್ರಿಯ ಮರದ ಕಾಲುಸಂಕದ ಸ್ಪಲ್ಪ ದೂರದಲ್ಲಿ ತೋಡಿಗೆ ಮೋರಿಗಳನ್ನು ಹಾಕಿ, ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಜನರು ಗುಂಡ್ರಿ ಕಾಲುಸಂಕ ಹತ್ತಿರದ ದಾರಿ ಎಂದು ಬರುತ್ತಾರೆ. ಕಾಲುಸಂಕ ಇರುವ ಸ್ಥಳದಲ್ಲಿ ಸ್ಥಳೀಯರೊಬ್ಬರ ಪಟ್ಟಾಸ್ಥಳ ಇದೆ. ಕಾಲುಸಂಕ ನಿರ್ಮಿಸಲು ಅವರ ವಿರೋಧ ಇದೆ. ಅವರು ಜಾಗ ಬಿಟ್ಟುಕೊಟ್ಟರೆ ಸುಸಜ್ಜಿತವಾದ ಕಾಲುಸಂಕ ನಿರ್ಮಿಸುತ್ತೇವೆ.
-ಚಂದ್ರಶೇಖರ ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ಅಮಾಸೆಬೈಲು

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next