ನವದೆಹಲಿ: ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇಗುಲಕ್ಕೆ ಅಂಟಿಕೊಂಡಿರುವ ಶಾಹಿ ಈದ್ಗಾ ಮಸೀದಿ ಆವರಣದ ಸಮೀಕ್ಷೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ (ಡಿಸೆಂಬರ್ 15) ತಿರಸ್ಕರಿಸಿದೆ.
ಇದನ್ನೂ ಓದಿ:Ramanagar; ಸಿಪಿವೈ ಬಾವ ಹತ್ಯೆ ಪ್ರಕರಣ: ತಮಿಳುನಾಡಿನಲ್ಲಿ ಪ್ರಮುಖ ಆರೋಪಿ ಬಂಧನ
ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಮಸೀದಿಯನ್ನು ಕಟ್ಟಿಸಿದ್ದು, ಈ ಸ್ಥಳದಲ್ಲಿ ಸಮೀಕ್ಷೆ ನಡೆಸಬೇಕೆಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಸ್ಥಳೀಯ ಕೋರ್ಟ್ ಹಿಂದೂ ಅರ್ಜಿದಾರರ ಮನವಿಯನ್ನು ಸ್ವೀಕರಿಸಿತ್ತು. ಆದರೆ ಶಾಹಿ ಈದ್ಗಾ ಮಂಡಳಿ ಹೈಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸಿತ್ತು.
ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿತ್ತು. ಏತನ್ಮಧ್ಯೆ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಶಾಹಿ ಈದ್ಗಾ ಮಂಡಳಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಮುಂದುವರಿಯಲಿದೆ. ಹೈಕೋರ್ಟ್ ಈ ವಿಚಾರವನ್ನು ಕೈಗೆತ್ತಿಕೊಳ್ಳಲಿದ್ದು, ಈ ವಿಷಯದಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುವುದಿಲ್ಲ ಎಂದು ತಿಳಿಸಿರುವುದಾಗಿ ಹಿಂದೂ ಪರ ವಕೀಲರಾದ ವಿಷ್ಣುಶಂಕರ್ ಜೈನ್ ತಿಳಿಸಿದ್ದಾರೆ.
ಲಕ್ನೋ ಮೂಲದ ರಂಜನಾ ಅಗ್ನಿಹೋತ್ರಿ ಶ್ರೀಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿ ತನ್ನ ಮಾಲೀಕತ್ವಕ್ಕೆ ಸೇರಿದೆ ಎಂದು ಅರ್ಜಿ ಸಲ್ಲಿಸಿದ್ದರು. ಶ್ರೀಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕೆಂದು ಅಗ್ನಿಹೋತ್ರಿ ಮನವಿ ಮಾಡಿಕೊಂಡಿದ್ದರು.