ನವದೆಹಲಿ:ಲಡಾಖ್ ನ ಗಡಿ ಪ್ರದೇಶದ ವಿಚಾರದಲ್ಲಿ ಭಾರತ ಚೀನಾಕ್ಕೆ ಮತ್ತೊಂದು ಖಡಕ್ ಸಂದೇಶ ರವಾನಿಸಿದ್ದು, ನಿಯಮ ಪಾಲನೆ ವಿಚಾರದಲ್ಲಿ ಭಾರತ ಕಟಿಬದ್ಧವಾಗಿದೆ. ಅಲ್ಲದೇ ವಾಸ್ತವ ಗಡಿನಿಯಂತ್ರಣ ರೇಖೆ(ಎಲ್ ಎಸಿ)ಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಯಥಾಸ್ಥಿತಿಯಲ್ಲಿನ ಯಾವುದೇ
ಬದಲಾವಣೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ(ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ನಾವು ಗೌರವಿಸುತ್ತೇವೆ. ಆದರೆ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆ ಭಾರತ ಒಪ್ಪುವುದಿಲ್ಲ ಎಂದರು.
ಚೀನಾ ಗಡಿಯಲ್ಲಿ ಸಂಘರ್ಷವನ್ನು ಕೈಬಿಟ್ಟು ಹಾಗೂ ಸೇನೆಯನ್ನು ಹಿಂಪಡೆಯುವ ಮೂಲಕ ಭಾರತ ಜತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ನಮ್ಮ ನಿರೀಕ್ಷೆಯಾಗಿದೆ ಎಂದು ಶ್ರೀವಾಸ್ತವ್ ಹೇಳಿದರು.
ಗಡಿ ಪ್ರದೇಶದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ನಮ್ಮ ದ್ವಿಪಕ್ಷೀಯ ಒಪ್ಪಂದದ ಪ್ರಮುಖ ಅಂಶವಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾ ಜತೆಗಿನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿರುವುದಾಗಿ ವರದಿ ತಿಳಿಸಿದೆ.