Advertisement
ಈ ಬಗ್ಗೆ ಕರಾವಳಿಯಾದ್ಯಂತ ಎಲ್ಲರಲ್ಲೂ ಈ ರೀತಿಯ ಅನೇಕ ಪ್ರಶ್ನೆಗಳು ಉದ್ಭವಿಸ ತೊಡಗಿದವು. ಸೋಮವಾರ ಸಂಜೆ ಸುಮಾರು 7.23ಕ್ಕೆ ನೈಋತ್ಯ ಆಕಾಶದಿಂದ ಉತ್ತರಕ್ಕೆ ನಾಲ್ಕು ನಿಮಿಷ, ಹಾರಾಡುತ್ತಾ ಸಾಗಿದ ತೇಲುವ ಬೆಳಕಿನ ಮಾಲೆಯನ್ನು ಜನರು ನೋಡಿ ಬೆರಗಾದರು. ಇದು ತೇಲುವ ಬೆಳಕಿನ ಮಾಲೆಯಲ್ಲ. ಹಾಗೆಯೇ ಕಾಣುವ ಸುಮಾರು 60 ಕೃತಕ ಉಪಗ್ರಹಗಳ ಸಾಲು.
ಸಾಧಕ-ಬಾಧಕಗಳು: ಆಪ್ಟಿಕಲ್ ಫೈಬರ್‌ನಿಂದ ಹಳ್ಳಿ ಹಳ್ಳಿಗೂ ಇಂಟರ್‌ನೆಟ್ ಸಂಪರ್ಕ ಬಹುಕಷ್ಟ. ಆದರೆ ಈ ಕೃತಕ ಉಪಗ್ರಹಗಳಿಂದ ಸಂಪರ್ಕ ಅತೀ ಸುಲಭ ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಸಿಗ್ನಲ್‌ಗಾಗಿ ಟವರ್‌ಗಳ ಅವಲಂಬನೆ ಕ್ರಮೇಣ ತಪ್ಪಲಿದೆ. ಈ ಕೃತಕ ಉಪಗ್ರಹಗಳಿಂದ ಹಳ್ಳಿಗಳಿಗೂ ಹೈ ಸ್ಪೀಡ್ ಇಂಟರ್‌ನೆಟ್ ಸಂಪರ್ಕ ಒದಗಿಸಲು ಸಾಧ್ಯವಾಗಲಿದೆ. ಆದರೆ ಇವುಗಳಿಂದ ನಕ್ಷತ್ರಗಳ ವೀಕ್ಷಕರು, ಅಧ್ಯಯನಾಸಕ್ತರು, ಮತ್ತು ಖಗೋಳ ವಿಜ್ಞಾನಿಗಳಿಗೆ ತೊಂದರೆಯುಂಟಾಗಲಿದೆ. ಇನ್ನು ಕೆಲವು ವರ್ಷಗಳಲ್ಲಿ ಕಾಣುವ ಹತ್ತು ನಕ್ಷತ್ರಗಳಲ್ಲಿ ಒಂದು ಈ ಕೃತಕ ಉಪಗ್ರಹವಿರಬಹುದು. ಒಂದು ಆಕಾಶಕಾಯದ ಕುರಿತಂತೆ ಅಧ್ಯಯನ ಮಾಡುತ್ತಿರುವ ಖಗೋಳ ವಿಜ್ಞಾನಿಗೆ ಈ ಕೃತಕ ಉಪಗ್ರಹಗಳ ಬೆಳಕು ಬಲುದೊಡ್ಡ ಅಡಚಣೆಯಾಗಿ ಪರಿಣಮಿಸಬಹುದು.
Related Articles
Advertisement
ಖಗೋಳಾಸಕ್ತರ ಚಿಂತೆ: ಈ ವರೆಗೆ ಸುಮಾರು 11,670 ಕೃತಕ ಉಪ ಗ್ರಹಗಳನ್ನು ಹಾರಿಸಿಯಾ ಗಿದೆ. ಇವೆಲ್ಲವೂ ನೆಲದಿಂದ ಸುಮಾರು 200 ಕಿ.ಮೀ.ಗಳಿಂದ 36 ಸಾವಿರ ಕಿ.ಮೀ. ಎತ್ತರದಲ್ಲಿ ಭೂಮಿಗೆ ತಿರುಗುತ್ತಿವೆ. ಇವುಗಳಲ್ಲಿ ಈಗ 4,300 ಕೃತಕ ಉಪಗ್ರಹಗಳು ಕ್ರಿಯಾಶೀಲವಾಗಿವೆ. ಆದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಇವುಗಳ ಜತೆ ಇನ್ನೂ ಇಂತಹ 60 ಸಾವಿರ ಕೃತಕ ಉಪಗ್ರಹಗಳನ್ನು ಆಕಾಶಕ್ಕೆ ಹಾರಿ ಬಿಡಲು ಸ್ಯಾಟಲೈಟ್ ಕಂಪೆನಿಗಳು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಈ ಕೃತಕ ಉಪಗ್ರಹಗಳೇ ಹೊಸ ಆಕಾಶವನ್ನು ಸೃಷ್ಟಿಸುವವೋ ಏನೋ ಎನ್ನುವುದು ಖಗೋಳಾಸಕ್ತರ ಚಿಂತೆ.
– ಡಾ| ಎ.ಪಿ. ಭಟ್, ಉಡುಪಿ