Advertisement

ಗೆದ್ದರೂ ದಕ್ಕಲಿಲ್ಲ,ಬಿದ್ದರೂ ಸೋಲಲಿಲ್ಲ !

02:40 AM May 21, 2018 | Team Udayavani |

ಕುಂದಾಪುರ: ಕರಾವಳಿಯಲ್ಲಿ ಬಿಜೆಪಿ ಅದಮ್ಯ ಪಾರಮ್ಯ ಪಡೆಯಿತು. ಆದರೆ ಅಧಿಕಾರ ದಕ್ಕಲಿಲ್ಲ. ಕಾಂಗ್ರೆಸ್‌ ಉಡುಪಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಪಡೆಯಲಿಲ್ಲ, ದ.ಕ.ದಲ್ಲಿ ಕೇವಲ ಒಂದು ಸ್ಥಾನ ಪಡೆಯಿತು. ಜೆಡಿಎಸ್‌ಗೆ ಒಂದೂ ಸ್ಥಾನ ದೊರೆಯಲಿಲ್ಲ. ಹಾಗಿದ್ದರೂ ಅಧಿಕಾರ ಈ ಎರಡು ಪಕ್ಷಗಳ ಪಾಲಿಗೆ ದೊರೆತಿದೆ. ಇದರಿಂದ ಬಿಜೆಪಿ ನಾಯಕರು, ಕಾರ್ಯಕರ್ತರು ಮಂಕಾಗಿದ್ದರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ. ಇದರ ಮೊದಲ ಭಾಗವಾಗಿ ಕಾಂಗ್ರೆಸ್‌ ವಿಜಯೋತ್ಸವ ಮಾಡಿ ಬಿಜೆಪಿಯ ಗೆಲುವಿನ ವಿಜಯೋತ್ಸವಕ್ಕೆ ತಣ್ಣೀರು ಎರಚಿದೆ. ಜೆಡಿಎಸ್‌ ಕುಡಾ ವಿಜಯೋತ್ಸಾಹ ಮೂಡಿಸಿದೆ.

Advertisement

ರಾಜ್ಯದಲ್ಲಿ ಐದನೇ ಸ್ಥಾನ
ಕುಂದಾಪುರದಲ್ಲಿ ಐದನೇ ಬಾರಿ ಗೆದ್ದ ಹಾಲಾಡಿ ಶ್ರೀನಿವಾಸ ಶೆಟ್ಟ ವಿರುದ್ಧ ಟಿಕೆಟ್‌ ಘೋಷಣೆಯಾದಾಗ ಒಂದಷ್ಟು ಬಿನ್ನಮತ ಕಾಣಿಸಿತು. ಆದರೆ ಅದಕ್ಕೆಲ್ಲ ಉತ್ತರವಾಗಿ ಅವರು ಕರಾವಳಿಯ (ಅವಿಭಜಿತ ದ.ಕ. ಜಿಲ್ಲೆ) ಇತಿಹಾಸದಲ್ಲೇ ಒಂದು ಲಕ್ಷ ಮತ ಪಡೆದ ಮೊದಲ ಅಭ್ಯರ್ಥಿ ಎನಿಸಿಕೊಂಡರು. ಕರಾವಳಿಯ ಇತಿಹಾಸದಲ್ಲೇ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದವರು ಎಂಬ ಸಾಧನೆ ಮುಡಿಗೇರಿಸಿಕೊಂಡರು. 

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ (2018) ರಾಜ್ಯದಲ್ಲೇ ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದವರಲ್ಲಿ  ಹಾಲಾಡಿ ಅವರಿಗೆ ಐದನೇ ಸ್ಥಾನ. 104 ಬಿಜೆಪಿ ಶಾಸಕರಲ್ಲಿ ಹಾಲಾಡಿ ಎರಡನೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದವರು ಎಂಬ ದಾಖಲೆಗೆ ಪಾತ್ರರಾದರು. ಕಾರ್ಕಳದ ವೀರಪ್ಪ ಮೊಯಿಲಿ ಅವರ ನಂತರ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಬಾರಿ ಗೆದ್ದವರು ಹಾಲಾಡಿ ಅವರು ಮಾತ್ರ. ಕುಂದಾಪುರ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಹಾಗೂ ಸತತ ಐದು ಬಾರಿ ಗೆದ್ದ ಮೊದಲ ಶಾಸಕ ಹಾಲಾಡಿ. ಈ ಹಿಂದೆ ಪ್ರತಾಪಚಂದ್ರ ಶೆಟ್ಟಿ ಅವರು ಸತತ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಅವರ ವಿಜಯದ ಸರಣಿಗೆ ತಡೆ ಒಡ್ಡಿ ವಿಜಯಮಾಲೆ ಧರಸಿದ ಹಾಲಾಡಿ ಇನ್ನೂ ಆ ಪರಂಪರೆ ಮುಂದುವರಿಸಿದ್ದಾರೆ.
 
ಅಂದ ಹಾಗೇ ಇದು ಹಾಲಾಡಿಯವರ ಸತತ ಐದನೇ ಗೆಲುವು. ಪ್ರತಿ ಬಾರಿ ಗೆಲುವಿನ ಅಂತರ ಹೆಚ್ಚುತ್ತಲೆ ಹೋಗಿದೆ. 1999 ರಲ್ಲಿ ಮೊದಲ ಬಾರಿ ಹಾಲಾಡಿ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಪಡೆದ ಒಟ್ಟು ಮತಗಳು 48,051. ಆದರೆ ಈ ಬಾರಿ ಗೆಲುವಿನ ಅಂತರವೇ 56,405 ಮತಗಳು. 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ ಚಂದ್ರ ಶೆಟ್ಟಿ ಪಡೆದ ಮತ 47,030. ಅದಕ್ಕಿಂತ ಹೆಚ್ಚು ಮತ ಈ ತನಕ, ಎರಡು ದಶಕಗಳ ಅವಧಿಯಲ್ಲಿ ಕಾಂಗ್ರೆಸ್‌ ಪಡೆದಿಲ್ಲ. ಈ ಬಾರಿ ಕಾಂಗ್ರೆಸ್‌ ಪಡೆದ ಮತ 47,029. 

ಇಪ್ಪತ್ತು ವರ್ಷಗಳಲ್ಲಿ ಹತ್ತಿರತ್ತಿರ ಒಂದು ಲಕ್ಷ ಮತದಾರರು ಹೆಚ್ಚಾಗಿದ್ದಾರೆ, ಆದರೆ ಕಾಂಗ್ರೆಸ್‌ ಹಾಲಾಡಿ ವಿರುದ್ಧ ಮತಗಳಿಗೆ ಹೆಚ್ಚಿಸಿಕೊಳ್ಳಲು ಪ್ರಯತ್ನಪಡುತ್ತಿದೆ. ಹಾಲಾಡಿ ಗೆಲುವಿನ ಅಂತರ ಪ್ರತೀ ಬಾರಿ ಹೆಚ್ಚುತ್ತ ಹೋಗಿದೆ.1999- 1,021 ಮತಗಳು, 2004- 19,665 ಮತಗಳು, 2008- 25,083 ಮತಗಳು, 2013- 40,611 (ಪಕ್ಷೇತರರಾಗಿ), 2018- 56,405  ಮತಗಳ ಅಂತರದಿಂದ ಗೆದ್ದಿ ದ್ದಾರೆ. ಈ ಬಾರಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಹಾಲಾಡಿಯವರಿಗೆ ಸಚಿವ ಸ್ಥಾನ ನಿರೀಕ್ಷಿಸಲಾಗಿತ್ತು. ಆದರೆ ಸದ್ಯಕ್ಕೆ ಅವಕಾಶ ತಪ್ಪಿದೆ. 

ಜಿಲ್ಲೆಯಲ್ಲಿ  ಜೆಡಿಎಸ್‌ ಸ್ಥಿತಿ
ಜೆಡಿಎಸ್‌ಗೆ ಎರಡೂ ಜಿಲ್ಲೆಗಳಲ್ಲಿ ಆಯ್ಕೆಯಾದ ಶಾಸಕರಿಲ್ಲ. ಆದ್ದರಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದವರಿಗೆ ಸರಕಾರದಲ್ಲಿ ಯಾವುದಾದರೂ ಸ್ಥಾನ ದೊರೆಯಬಹುದೇ ಎಂಬ ನಿರೀಕ್ಷೆ ಇದೆ. ಕುಂದಾಪುರದಲ್ಲಿ  ತೆಕ್ಕಟ್ಟೆ ಪ್ರಕಾಶ್‌ ಶೆಟ್ಟಿ, ಬೈಂದೂರಿನಿಂದ ರವಿ ಶೆಟ್ಟಿ , ಕಾಪುವಿನಲ್ಲಿ ಮನ್ಸೂರ್‌ ಇಬ್ರಾಹಿಂ , ಉಡುಪಿಯಲ್ಲಿ ಗಂಗಾಧರ ಭಂಡಾರಿ ಅವರು ಸ್ಪರ್ಧಿಸಿದ್ದು ಮತ ಗಳಿಕೆಯಲ್ಲಿ  ನಿರೀಕ್ಷಿತ ಸಾಧನೆ ಇಲ್ಲದಿದ್ದರೂ ಜೆಡಿಎಸ್‌ ಅಸ್ತಿತ್ವಕ್ಕಾಗಿ ಹೋರಾಡಿದ್ದಾರೆ ಎನ್ನುವುದು ಇವರಿಗೆ ಇರುವ ಪ್ಲಸ್‌ ಪಾಯಿಂಟ್‌. ಕರಾವಳಿಯಲ್ಲಿ  ಜೆಡಿಎಸ್‌ ಇಲ್ಲದಿರುವಾಗ ಪಕ್ಷದ ಉಳಿವಿಗೆ ಇವರ ಸ್ಪರ್ಧೆ ಗಮನಾರ್ಹ. ಆದ್ದರಿಂದ ಸಮ್ಮಿಶ್ರ ಸರಕಾರ ಬಂದಾಗ ಇವರ ಪಾಲಿಗೆ ಅಧಿಕಾರದ ಶಕ್ತಿ ಕೇಂದ್ರ ಹತ್ತಿರವಾಗಿದೆ. ಅಂತೂ ಕರಾವಳಿಯಲ್ಲಷ್ಟೇ ಅಲ್ಲ ರಾಜ್ಯದಲ್ಲೇ ಗೆದ್ದವರಿಗೆ ದಕ್ಕಲಿಲ್ಲ, ಬಿದ್ದವರಿಗೆ ಸೋಲಿಲ್ಲ ಎಂದಾಗಿದೆ. ಮೂರೂ ಪಕ್ಷದ ಕಾರ್ಯಕರ್ತರು ಬೇರೆ ಬೇರೆ ಕಾರಣಗಳಿಗೆ ವಿಜಯೋತ್ಸಾಹದಲ್ಲಿದ್ದಾರೆ. 

Advertisement

ಕಾಂಗ್ರೆಸ್‌ಗೆ ಸಚಿವ ಪದವಿಯಾದರೆ
ಕಾಂಗ್ರೆಸ್‌ನಿಂದ ಪ್ರತಾಪಚಂದ್ರ ಶೆಟ್ಟರೇ ಸದ್ಯ ಸಮರ್ಥ ಅಭ್ಯರ್ಥಿಯಾಗಿದ್ದು ಅವರಿಗೇ ಸಚಿವ ಸ್ಥಾನ ನಿರೀಕ್ಷಿಸಲಾಗಿದೆ. 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಅವರು ಅನುಭವಿ ಹಾಗೂ ಹಿರಿಯರು. ಇವರ ಹೊರತಾಗಿ ಉಡುಪಿ ಜಿಲ್ಲೆಯಲ್ಲಿಯೇ ಬೇರೆ ಕಾಂಗ್ರೆಸ್‌ ಜನಪ್ರತಿನಿಧಿಗಳಿಲ್ಲ. ಇವರಲ್ಲದಿದ್ದರೆ ಹೊರಗಿನ ಜಿಲ್ಲೆಯ ಜನಪ್ರನಿಧಿಗಳನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಆಗ ಪಕ್ಷ ಸಂಘಟನೆಗೆ ತೊಡಕಾಗುತ್ತದೆ. ಈಗಾಗಲೇ ಎಲ್ಲ ಸ್ಥಾನಗಳನ್ನು ಕಳೆದುಕೊಂಡ ಕಾಂಗ್ರೆಸ್‌ಗೆ ಇದು ಕಷ್ಟವಾದರೆ ಬಿಜೆಪಿಗೆ ಇಷ್ಟವಾಗುತ್ತದೆ. 

– ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next