Advertisement

48 ರನ್ನಿಗೆ ಉದುರಿದ ವಿಂಡೀಸ್‌ ಆಫ್ರಿಕಾ 10 ವಿಕೆಟ್‌ ಜಯಭೇರಿ

03:45 AM Jul 03, 2017 | Team Udayavani |

ಲೀಸ್ಟರ್‌: ತನ್ನ ಏಕದಿನ ಇತಿಹಾಸದಲ್ಲೇ ದ್ವಿತೀಯ ಕನಿಷ್ಠ ಮೊತ್ತಕ್ಕೆ ಕುಸಿದ ವೆಸ್ಟ್‌ ಇಂಡೀಸ್‌ ವನಿತಾ ತಂಡ, ರವಿವಾರದ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಆಘಾತಕಾರಿ ಸೋಲುಂಡಿದೆ.

Advertisement

ಲೀಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ವನಿತೆಯರು ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಳಿಗೆ ತತ್ತರಿಸಿ 25.2 ಓವರ್‌ಗಳಲ್ಲಿ ಕೇವಲ 48 ರನ್ನಿಗೆ ಆಲೌಟಾದರು. ದಕ್ಷಿಣ ಆಫ್ರಿಕಾ ಬರೀ 6.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 51 ರನ್‌ ಬಾರಿಸಿ ಗೆದ್ದು ಬಂದಿತು. ಇದರೊಂದಿಗೆ ಆಡಿದ ಮೂರೂ ಪಂದ್ಯಗಳನ್ನು ಸೋತ ಸಾರಾ ಟಯ್ಲರ್‌ ಬಳಗ ಕೂಟದಿಂದ ಬೇಗನೇ ಹೊರಬೀಳುವ ಭೀತಿಗೆ ಸಿಲುಕಿದೆ. ವಿಂಡೀಸ್‌ 2013ರ ಕೂಟದ ರನ್ನರ್ ಅಪ್‌ ತಂಡವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇದು ವೆಸ್ಟ್‌ ಇಂಡೀಸ್‌ ಏಕದಿನ ಇತಿಹಾಸದ 2ನೇ ಅತ್ಯಂತ ಕಡಿಮೆ ಸ್ಕೋರ್‌ ಆಗಿದೆ. 2008ರಲ್ಲಿ ಇಂಗ್ಲೆಂಡ್‌ ವಿರುದ್ಧ 41 ರನ್ನಿಗೆ ಆಲೌಟ್‌ ಆದದ್ದು ವಿಂಡೀಸಿನ ಕನಿಷ್ಠ ಗಳಿಕೆ.ದಕ್ಷಿಣ ಆಫ್ರಿಕಾ ನಾಯಕಿ, ಲೆಗ್‌ ಸ್ಪಿನ್ನರ್‌ ಡೇನ್‌ ವಾನ್‌ ನೀಕರ್ಕ್‌ ಮತ್ತು ಮಧ್ಯಮ ವೇಗಿ ಮರಿಜಾನ್‌ ಕಾಪ್‌ ತಲಾ 4 ವಿಕೆಟ್‌ ಹಾರಿಸಿ ಕೆರಿಬಿಯನ್‌ ವನಿತೆಯರನ್ನು ಸಂಕಷ್ಟಕ್ಕೆ ತಳ್ಳಿದರು. ಇವರಲ್ಲಿ ನೀಕರ್ಕ್‌ ಅವರದು ಅಮೋಘ ಸಾಧನೆ. ಅವರು ಒಂದೂ ರನ್‌ ನೀಡದೆ ಈ ನಾಲ್ಕೂ ವಿಕೆಟ್‌ಗಳನ್ನು ಉಡಾಯಿಸಿದರು (3.2-3-0-4). ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ ಒಬ್ಬ ಬೌಲರ್‌ ಯಾವುದೇ ರನ್‌ ನೀಡದೆ 4 ವಿಕೆಟ್‌ ಹಾರಿಸಿದ ಮೊದಲ ದೃಷ್ಟಾಂತ ಇದಾಗಿದೆ! ಆದರೆ ನೀಕರ್ಕ್‌ಗಿಂತ ಮೊದಲೇ ವಿಂಡೀಸ್‌ ಬ್ಯಾಟಿಂಗ್‌ ಸರದಿಯನ್ನು ಹಾನಿಗೈದ ಕಾಪ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಾಪ್‌ ಸಾಧನೆ 14ಕ್ಕೆ 4 ವಿಕೆಟ್‌. ಶಬಿ°ಮ್‌ ಇಸ್ಮಾಯಿಲ್‌ 16 ರನ್ನಿಗೆ 2 ವಿಕೆಟ್‌ ಕಿತ್ತರು.

ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ಸರದಿಯಲ್ಲಿ ಎರಡಂಕೆಯ ಗಡಿ ತಲುಪಿದ್ದು ಶೆಡೀನ್‌ ನೇಶನ್‌ ಮಾತ್ರ (26). ಉಳಿದಂತೆ ಐವರು ಖಾತೆಯನ್ನೇ ತೆರೆಯಲಿಲ್ಲ. 4 ಮಂದಿ 4 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next