Advertisement
ಲಂಡನ್: ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಹಳಿ ಏರಿದ ಭಾರತದ ವನಿತೆಯರೀಗ ಕ್ವಾರ್ಟರ್ ಫೈನಲ್ ಹಣಾಹಣಿಗೆ ಸಜ್ಜಾಗಿದ್ದಾರೆ. ಗುರುವಾರ ನಡೆಯುವ ಮುಖಾ ಮುಖೀಯಲ್ಲಿ ರಾಣಿ ರಾಮ್‌ಪಾಲ್ ಪಡೆ ಅಯರ್‌ಲ್ಯಾಂಡ್ ವಿರುದ್ಧ ಸೆಣಸಲಿದೆ. ಭಾರತದ ಪಾಲಿಗೆ ಇದೊಂದು ಸೇಡಿನ ಪಂದ್ಯ. “ಬಿ’ ಗುಂಪಿನ ತಂಡಗಳಾದ ಭಾರತ-ಅಯರ್‌ಲ್ಯಾಂಡ್ ಈಗಾಗಲೇ ಲೀಗ್ ಹಂತ ದಲ್ಲಿ ಎದುರಾಗಿದ್ದು, ಇದರಲ್ಲಿ ಭಾರತ 1-0 ಗೋಲಿನಿಂದ ಶರಣಾಗಿತ್ತು. ಇದಕ್ಕೀಗ ಸೇಡು ತೀರಿಸಿ ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ರಾಣಿ ಬಳಗ ಕಾರ್ಯತಂತ್ರ ರೂಪಿಸಬೇಕಿದೆ. ಗೆದ್ದರೆ ಭಾರತದ ವನಿತೆಯರು 44 ವರ್ಷಗಳ ಬಳಿಕ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿದ್ದಾರೆ.
ಲೀಗ್ ಹಂತದಲ್ಲಿ ಒಂದೂ ಗೆಲುವು ಕಾಣದೆ ತೃತೀಯ ಸ್ಥಾನಕ್ಕೆ ಕುಸಿದಿದ್ದ ಭಾರತ, “ಕ್ರಾಸ್-ಓವರ್’ ಪದ್ಧತಿಯ ನೆರವಿನಿಂದ ನಾಕೌಟ್ ಪ್ರವೇಶಿಸಿತ್ತು. ಇಲ್ಲಿ ಮಂಗಳವಾರ ರಾತ್ರಿ ಇಟಲಿಯನ್ನು 3-0 ಗೋಲುಗಳಿಂದ ಮಣಿಸಿತು. ಲಾಲ್ರೆಮಿÕಯಾಮಿ (20ನೇ ನಿಮಿಷ), ನೇಹಾ ಗೋಯಲ್ (45ನೇ ನಿಮಿಷ) ಹಾಗೂ ವಂದನಾ ಕಟಾರಿಯಾ (55ನೇ ನಿಮಿಷ) ಗೋಲು ಸಿಡಿಸಿ ಮೆರೆದಿದ್ದರು. ಇದು ಈ ಕೂಟದಲ್ಲಿ ಭಾರತ ಸಾಧಿಸಿದ ಮೊದಲ ಗೆಲುವಾಗಿತ್ತು. ಇದೇ ರಭಸವನ್ನು ಕಾಯ್ದುಕೊಂಡು ಅಯರ್‌ಲ್ಯಾಂಡ್ ವಿರುದ್ಧ ಸವಾರಿ ಮಾಡಬೇಕಿದೆ.
ಆದರೆ ಐರಿಷ್ ಪಡೆಯನ್ನು ಎದುರಿಸುವುದು ಸುಲಭದ ಸವಾ ಲೇನೂ ಅಲ್ಲ. ಇವರೆದುರು ಭಾರತ ಸತತ 2 ಸೋಲನುಭವಿಸಿ ಹಿನ್ನಡೆ ಅನುಭವಿಸಿದ್ದನ್ನು ಮರೆಯುವಂತಿಲ್ಲ. ಲೀಗ್ ಹಂತದ ಸೋಲಿಗೂ ಮುನ್ನ ಕಳೆದ ವರ್ಷ ಜೊಹಾನ್ಸ್‌ಬರ್ಗ್
ನಲ್ಲಿ ನಡೆದ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಲ್ಲೂ ಅಯರ್‌ಲ್ಯಾಂಡ್ ಭಾರತವನ್ನು ಮಣಿಸಿತ್ತು (2-1).
ಲೀಗ್ ಹಂತದಲ್ಲೂ ಅಯರ್‌ಲ್ಯಾಂಡ್ ಉತ್ತಮ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಇಂಗ್ಲೆಂಡ್ ವಿರುದ್ಧ ಸೋತರೂ ಭಾರತ ಹಾಗೂ ಅಮೆರಿಕವನ್ನು ಕೆಡವಿ (3-1) ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿತ್ತು.
Related Articles
ಅಮೋಘ ಜಯದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರಿಂದ ಭಾರತ ತಂಡದ ಸ್ಫೂರ್ತಿ ಹಾಗೂ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ. ನಾಯಕಿ ರಾಣಿ ರಾಮ್‌ಪಾಲ್ ಕೂಡ ಇದನ್ನೇ ಹೇಳಿದ್ದಾರೆ. “ಆರಂಭದಲ್ಲಿ ನಾವು ಗೋಲಿನ ಬರಗಾಲದಲ್ಲಿದ್ದೆವು. ಇಟಲಿ ವಿರುದ್ಧ ಈ ಕೊರತೆಯನ್ನು ನೀಗಿಸಿಕೊಂಡಿದ್ದೇವೆ. ಪ್ರಯಾಣ ಮುಂದುವರಿಸಲು ಹೊಸ ಸ್ಫೂರ್ತಿ ಲಭಿಸಿದೆ. ಈ ಪಯಣ ನಾಳೆಗೇ ಕೊನೆಯಾಗುವುದನ್ನು ನಾವು ಬಯಸುವುದಿಲ್ಲ…’ ಎಂದಿದ್ದಾರೆ.
ಭಾರತ ಸೆಮಿಫೈನಲ್ ಪ್ರವೇಶಿಸಿದರೆ ಸ್ಪೇನ್ ಅಥವಾ ಜರ್ಮನಿ ಸವಾಲನ್ನು ಎದುರಿಸಲಿದೆ.
Advertisement