Advertisement

Football: ವನಿತಾ ವಿಶ್ವಕಪ್‌ ಫುಟ್‌ಬಾಲ್‌: ಸ್ವೀಡನ್‌ಗೆ ಆಘಾತ; ಸ್ಪೇನ್‌ ಫೈನಲಿಗೆ

11:22 PM Aug 15, 2023 | Team Udayavani |

ವೆಲ್ಲಿಂಗ್ಟನ್‌: ಕೊನೆ ಕ್ಷಣದಲ್ಲಿ ಒಲ್ಗಾ ಕಾರ್ಮೊನಾ ಅವರು ಹೊಡೆದ ಗೋಲಿನ ನೆರವಿನಿಂದ ಸ್ಪೇನ್‌ ತಂಡವು ಸ್ವೀಡನ್‌ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಹಂತಕ್ಕೇರಿತು. ಸ್ಪೇನ್‌ ಫೈನಲ್‌ ಹಂತಕ್ಕೇರಿರುವುದು ಇದೇ ಮೊದಲ ಸಲವಾಗಿದೆ.

Advertisement

ರವಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಸ್ಪೇನ್‌ ತಂಡವು ಸಹ ಆತಿಥ್ಯ ವಹಿಸಿರುವ ಆಸ್ಟ್ರೇಲಿಯ ಅಥವಾ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳ ನಡುವಣ ಸೆಮಿಫೈನಲ್‌ ಹೋರಾಟವು ಬುಧವಾರ ನಡೆಯಲಿದೆ. ಮುಂದಿನ ಶನಿವಾರ ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಣಯ ಪಂದ್ಯ ನಡೆಯಲಿದೆ.
ಗೆಲ್ಲುವ ಉತ್ಸಾಹದಿಂದಲೇ ತೀವ್ರ ಪೈಪೋಟಿಯಿಂದ ಹೋರಾಡಿದ ಸ್ವೀಡನ್‌ ತಂಡ ಸೆಮಿಫೈನಲ್‌ನಲ್ಲಿ ಮತ್ತೆ ನಿರಾಶೆ ಅನುಭವಿಸಿತು. ಪೀಟರ್‌ ಗರ್ಹಾಡ್ಸìನ್‌ ಅವರ ನೇತೃತ್ವದ ಸ್ವೀಡನ್‌ ತಂಡ ನಾಲ್ಕು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ ಹಾಗೂ ಕಳೆದ ವರ್ಷದ ಯುರೋಪಿಯನ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ ಹಂತದಲ್ಲಿ ಮುಗ್ಗರಿಸಿತ್ತು.

81ನೇ ನಿಮಿಷದಲ್ಲಿ ಗೋಲು
ಇಲ್ಲಿನ ಈಡನ್‌ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸ್ಪೇನ್‌ ಮತ್ತು ಸ್ವೀಡನ್‌ ಪ್ರಬಲ ಹೋರಾಟ ಸಂಘಟಿಸಿದ್ದವು. ಇದರಿಂದಾಗಿ 81 ನಿಮಿಷಗಳವರೆಗೆ ಗೋಲು ರಹಿತವಾಗಿ ಪಂದ್ಯ ಸಾಗಿತ್ತು. ಈ ಹಂತದಲ್ಲಿ ಸ್ಪೇನ್‌ನ ಹದಿ ಹರೆಯದ ಸಲ್ಮಾ ಪ್ಯಾರಾಲ್ಯುಲೊ ಅಮೋಘ ಗೋಲನ್ನು ಹೊಡೆದು ಪಂದ್ಯಕ್ಕೆ ಜೀವ ತುಂಬಿದರು. ನೆದರ್ಲೆಂಡ್ಸ್‌ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿಯೂ ಸಲ್ಮಾ ಅಮೋಘ ಆಟದ ಪ್ರದರ್ಶನ ನೀಡಿದ್ದರು.

ಸ್ಪೇನ್‌ ಮುನ್ನಡೆ ಸಾಧಿಸಿದ ಬಳಿಕ ಸ್ವೀಡನ್‌ ಆಟಗಾರ್ತಿಯರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಸಮಬಲ ಸಾಧಿಸಲು ಹಲವು ಬಾರಿ ಪ್ರಯತ್ನ ಮಾಡಿದರು. 88ನೇ ನಿಮಿಷದಲ್ಲಿ ರೆಬೆಕಾ ಬ್ಲೋಮ್‌ಕ್ವಿಸ್ಟ್‌ ಗೋಲನ್ನು ಹೊಡೆದು ಸಮಬಲ ತಂದರು. ಆದರೆ ಈ ಉತ್ಸಾಹ ಹೆಚ್ಚು ಹೊತ್ತು ಇರಲಿಲ್ಲ. ಎರಡು ನಿಮಿಷ ಮುಗಿಯುವಷ್ಟರಲ್ಲಿ ಒಲ್ಗಾ ಕಾರ್ಮೊನಾ ಅದ್ಭುತ ಗೋಲು ಹೊಡೆದು ಸ್ಪೇನ್‌ಗೆ ಮತ್ತೆ ಮುನ್ನಡೆ ಒದಗಿಸಿದರಲ್ಲದೇ ಪಂದ್ಯ ಗೆಲ್ಲಲು ನೆರವಾದರು.

ಸರಿಯಾಗಿ ವರ್ಷದ ಹಿಂದೆ ತಂಡದ ಕೋಚ್‌ ಜಾರ್ಗ್‌ ವಿಲ್ಡಾ ಅವರನ್ನು ವಜಾಗೊಳಿಸುವಂತೆ ಸ್ಪೇನ್‌ ತಂಡದ 15 ಆಟಗಾರರು ಬೆದರಿಕೆ ಹಾಕಿದ್ದರು. ಆದರೆ ತಂಡ ವ್ಯವಸ್ಥಾಪಕರು ವಿಲ್ಡಾ ಅವರನ್ನು ಕೋಚ್‌ ಆಗಿ ಉಳಿಸಿಕೊಂಡಿದ್ದರು. ಅವರಿಂದು ಪಂದ್ಯ ಆರಂಭಗೊಳ್ಳಲು ಒಂದು ತಾಸು ಇರುವಾಗ ಅಲೆಕ್ಸಿಯಾ ಪುಟೆಲ್ಲಾಸ್‌ ಅವರ ಬದಲಿಗೆ ಪ್ಯಾರಾಲ್ಯುಲೊ ಅವರನ್ನು ಆಟವಾಡುವ ಬಳಗಕ್ಕೆ ಸೇರಿಸಿದ್ದರು. ಅವರ ಈ ನಿರ್ಧಾರದಿಂದ ಸ್ಪೇನ್‌ ಮೇಲುಗೈ ಸಾಧಿಸಿತಲ್ಲದೇ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶವನ್ನು ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next