Advertisement

ಮದ್ಯದ ವಿರುದ್ಧ ಮಹಿಳಾ ಸಂಘಗಳು ಹೋರಾಟ ನಡೆಸಲಿ

11:36 AM Oct 26, 2018 | |

ಹುಣಸೂರು: ಯಾವುದೇ ಸರ್ಕಾರಗಳು ಬಂದರೂ ಸಂಪೂರ್ಣ ಮದ್ಯಪಾನ ನಿಷೇಧವಾಗಿಲ್ಲ. ಎಲ್ಲಾ ಭಾಗ್ಯಗಳ ಜೊತೆಗೆ ಮದ್ಯ ನಿಷೇಧಿಸಿ ಮುತ್ತೈದೆ ಭಾಗ್ಯ ಕಲ್ಪಿಸಬೇಕಿದೆ. ಇದಕ್ಕಾಗಿ ಎಲ್ಲಾ ಮಹಿಳಾ ಸಂಘಗಳು ಹೋರಾಟ ನಡೆಸಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮನವಿ ಮಾಡಿದರು.

Advertisement

ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಗಾಂಧೀಜಿ 150ನೇ ಜಯಂತಿ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಸಬಾ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕೆಂಬುದು ಗಾಂಧೀಜಿ ಆಶಯವಾಗಿತ್ತು. ಲಕ್ಷಾಂತರ ಕುಟುಂಬಗಳು ಕುಡಿತದ ಚಟಕ್ಕೆ ಬಲಿಯಾಗಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಮದ್ಯವರ್ಜನ ಶಿಬಿರ ಆಯೋಜಿಸಿ ಪಾನಮುಕ್ತ ಸಮಾಜ ನಿರ್ಮಾಣಕ್ಕೆ ಅಲ್ಪ ಕಾಣಿಕೆ ನೀಡಿದೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸುವ ಮೂಲಕ ಯುವ ಪೀಳಿಗೆ ದುಶ್ಚಟ, ಸಾಮಾಜಿಕ ಪಿಡುಗುಗಳಿಂದ ದೂರವಿರುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು. 

ಕಿಡ್ನಿಗೆ ಅಪಾಯ: ತಾಪಂ ಇಒ ಕೃಷ್ಣಕುಮಾರ್‌ ಮಾತನಾಡಿ, ವಿಶ್ವದಲ್ಲಿ ಕುಡಿತದಿಂದ 30 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದರೆ, ದೇಶದಲ್ಲಿ ಶೇ.5 ರಷ್ಟು ಮಂದಿ ಮದ್ಯ ಸೇವನೆಯಿಂದಾಗಿ ಕಿಡ್ನಿ ತೊಂದರೆಗೊಳಗಾಗಿ  ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮದ್ಯ ವ್ಯಸನದಿಂದ ದೂರ ಮಾಡುವ ಕಾರ್ಯದಲ್ಲಿ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ ಎಂದು ಶ್ಲಾ ಸಿದರು.

ನಿಯಮ ಪಾಲಿಸಿ: ವೃತ್ತ ನಿರೀಕ್ಷಕ ಪೂವಯ್ಯ, ಮಕ್ಕಳು ದಾಖಲೆ ಇಲ್ಲದೆ ಹಾಗೂ 18 ವರ್ಷದೊಳಗಿನವರು ವಾಹನ ಚಲಾವಣೆ ಮಾಡಿದಲ್ಲಿ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ಫ‌ಲಾನುಭವಿಗಳಿಗೆ ಸೌಲಭ್ಯ: ಯೋಜನೆಯ ಯೋಜನಾಧಿಕಾರಿ ಯಶೋಧಾಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ 3,267 ಸ್ವಸಹಾಯ ಸಂಘಗಳಿದ್ದು, 9 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಸಂಘಗಳಿಗೆ ಯುನಿಯನ್‌ ಬ್ಯಾಂಕ್‌ನಿಂದ 211 ಕೋಟಿ ರೂ.  ನೆರವು ನೀಡಲಾಗಿದೆ.

56 ಸೇವಾ ಕೇಂದ್ರ ತೆರೆಯಲಾಗಿದೆ. ಕೃಷಿ ಅಭಿವೃದ್ಧಿ ಕಾರ್ಯಕ್ರಮಕ್ಕೆ 13.99 ಲಕ್ಷ ರೂ. ವಿತರಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ 25 ಕೇಂದ್ರಗಳ ಮೂಲಕ 1078 ಕಾರ್ಯಕ್ರಮ ನಡೆಸಲಾಗಿದೆ. ನಿರ್ಗತಿಕ 42 ಕುಟುಂಬಕ್ಕೆ 8 ಲಕ್ಷ ರೂ., ಜೀವ ಭದ್ರತಾ ವಿಮೆ ಯೋಜನೆಯಡಿ 149 ಸದಸ್ಯರಿಗೆ 50.56 ಲಕ್ಷ ರೂ. ನೀಡಲಾಗಿದೆ.

5 ಮದ್ಯವರ್ಜನ ಶಿಬಿರ ನಡೆಸಲಾಗಿದೆ. 40 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಸ್ವತ್ಛತಾ ಜಾಗೃತಿ ಅಭಿಯಾನ ಹಾಗೂ ಹಸಿರೀಕರಣ ಯೋಜನೆ ಮತ್ತು ಹಸಿರು ಇಂಧನ ಕಾರ್ಯಕ್ರಮದಡಿ 1513 ಕುಟುಂಬಕ್ಕೆ ಸೋಲಾರ್‌, ಗೋಬರ್‌ ಗ್ಯಾಸ್‌, ಸ್ಟೌ ವಿತರಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಟರಾಜ ಸ್ವಾಮೀಜಿ, ಸಾಂಬಸದಾ ಶಿವ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಮಹದೇವ್‌, ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಸೋಮಶೇಖರ್‌, ಸಮಿತಿ ಅಧ್ಯಕ್ಷೆ ಸುನಿತಾ, ರೋಟರಿ ಸಂಸ್ಥೆ ಅಧ್ಯಕ್ಷ ನರಹರಿ, ಸಮಿತಿ ಸದಸ್ಯ ಧನಂಜಯ ಇತರರಿದ್ದರು. ಇದೇ ವೇಳೆ ಫ‌ಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next