ಕೇಪ್‌ಟೌನ್: ಸತತ 2 ಸೋಲುಗಳಿಂದ ಕಂಗೆಟ್ಟಿದ್ದ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ವನಿತಾ ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಯಶಸ್ವಿಯಾಗಿವೆ. ಶುಕ್ರವಾರ ನಡೆದ ಪಂದ್ಯಗಳಲ್ಲಿ ಕ್ರಮವಾಗಿ ಬಾಂಗ್ಲಾದೇಶ, ಐರ್ಲೆಂಡ್ ತಂಡಗಳನ್ನು ಮಣಿಸಿದವು.
ಕಿವೀಸ್‌ಗೆ 71 ರನ್ ಗೆಲುವು
ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್ 71 ರನ್ನುಗಳಿಂದ ಗೆದ್ದು ಬಂದಿತು. “ಎ’ ವಿಭಾಗದ ಈ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಮೂರೇ ವಿಕೆಟಿಗೆ 189 ರನ್ ಪೇರಿಸಿದರೆ, ಬಾಂಗ್ಲಾ 8 ವಿಕೆಟಿಗೆ 118 ರನ್ ಮಾಡಿ ಶರಣಾಯಿತು. ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ್ತಿ ಸುಝಿ ಬೇಟ್ಸ್ ಅಜೇಯ 81 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈಡನ್ ಕಾರ್ಸನ್ ಬೌಲಿಂಗ್‌ನಲ್ಲಿ ಮಿಂಚಿದರು (18ಕ್ಕೆ 3).
ವಿಂಡೀಸ್‌ಗೆ 6 ವಿಕೆಟ್ ಜಯ
“ಬಿ’ ವಿಭಾಗದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಐರ್ಲೆಂಡ್‌ಗೆ ಆಘಾತವಿಕ್ಕಿತು. ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 137 ರನ್ ಮಾಡಿದರೆ, ವಿಂಡೀಸ್ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿತು. ನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಹ್ಯಾಲಿ ಮ್ಯಾಥ್ಯೂಸ್ ಅಜೇಯ 66 ರನ್ ಬಾರಿಸಿ ವಿಂಡೀಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.