Advertisement
ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯ ಲೀಗ್ ಹಂತದ ನಾಲ್ಕೂ ಪಂದ್ಯಗಳನ್ನು ಗೆದ್ದು ಬಂದಿದೆ. ಇತ್ತ ಭಾರತ “ಬಿ’ ವಿಭಾಗದಲ್ಲಿ ಒಂದು ಪಂದ್ಯವನ್ನು ಸೋತು ದ್ವಿತೀಯ ಸ್ಥಾನಿಯಾಗಿದೆ. ಆಸ್ಟ್ರೇಲಿಯದ್ದು ಸಾಮರ್ಥ್ಯಕ್ಕೆ ತಕ್ಕ ಗೆಲುವಾದರೆ, ಭಾರತದ್ದು ಸಾಮಾನ್ಯ ಜಯ.
ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ, ವೆಸ್ಟ್ ಇಂಡೀಸನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ, ಬಳಿಕ ಇಂಗ್ಲೆಂಡ್‌ಗೆ 11 ರನ್ನುಗಳಿಂದ ಶರಣಾಯಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ, ಸಾಮಾನ್ಯ ಮಟ್ಟದ ಬೌಲಿಂಗ್ ಭಾರತದ ಪಾಲಿನ ದೊಡ್ಡ ಸಮಸ್ಯೆಗಳಾಗಿವೆ. ಪವರ್ ಪ್ಲೇ ಅವಧಿಯಲ್ಲಿ ನಿರೀಕ್ಷಿತ ರನ್ ಪೇರಿಸಲು ಕೌರ್ ಬಳಗ ವಿಫಲವಾಗುತ್ತಿದೆ. ಸ್ಮತಿ ಮಂಧನಾ ತಂಡವನ್ನು ಆಧರಿಸಿ ನಿಂತರೂ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಸಿಡಿದು ನಿಲ್ಲುತ್ತಿಲ್ಲ.
Related Articles
Advertisement
ಆಲ್‌ರೌಂಡರ್‌ಗಳ ಅಭಾವ ಭಾರತದ ಮತ್ತೂಂದು ಸಮಸ್ಯೆ. ದೀಪ್ತಿ ಶರ್ಮ ಹೊರತುಪಡಿಸಿದರೆ ಮತ್ತೋರ್ವ ಆಲ್‌ರೌಂಡರ್ ತಂಡದಲ್ಲಿಲ್ಲ.
ಬೌಲಿಂಗ್ ವಿಭಾಗವಂತೂ ತೀರಾ ಸಾಮಾನ್ಯ ಮಟ್ಟಕ್ಕೆ ಕುಸಿದಿದೆ. ಐರ್ಲೆಂಡ್ ವಿರುದ್ಧದ ಪಂದ್ಯವನ್ನೇ ಉದಾಹರಿಸುವುದಾದರೆ, ಎರಡರ ಬಳಿಕ ಮತ್ತೂಂದು ವಿಕೆಟ್ ಕೆಡವಲು ನಮ್ಮವರಿಂದ ಸಾಧ್ಯವಾಗಲಿಲ್ಲ. ಅದರಲ್ಲೂ ಒಂದು ರನೌಟ್. ರೇಣುಕಾ ಸಿಂಗ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಒಮ್ಮೆಲೇ ಘಾತಕವಾಗಿ ಪರಿಣಮಿಸುವ ನಂಬಿಕೆ ಇಲ್ಲ. ಆಸ್ಟ್ರೇಲಿಯದ ಬ್ಯಾಟಿಂಗ್ ಅಷ್ಟೊಂದು ಬಲಿಷ್ಠವಾಗಿದೆ. ಮೂನಿ, ಪೆರ್ರಿ, ಲ್ಯಾನಿಂಗ್, ಗಾರ್ಡನರ್, ಮೆಕ್‌ಗ್ರಾತ್… ಒಬ್ಬರಿಗಿಂತ ಒಬ್ಬರು ಬಲಾಡ್ಯರು. ಇವರಲ್ಲಿ ಇಬ್ಬರು ಪರಿಪೂರ್ಣ ಆಲ್‌ರೌಂಡರ್.
ಇದನ್ನೆಲ್ಲ ಗಮನಿಸುವಾಗ ಹಾಲಿ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯವೇ ಫೇವರಿಟ್ ಆಗಿ ಗೋಚರಿಸುತ್ತಿದೆ. ಕಾಂಗರೂ ಪಡೆ ಗೆದ್ದರೆ ಅದೊಂದು ನಿರೀಕ್ಷಿತ ಫಲಿತಾಂಶ. ಸೋತರಷ್ಟೇ ಅಚ್ಚರಿ. ಭಾರತ ಮೊದಲು ಬ್ಯಾಟಿಂಗ್ ಅವಕಾಶ ಪಡೆದು 180ರಷ್ಟು ರನ್ ಪೇರಿಸಿದರೆ ಒಂದು ಕೈ ನೋಡಬಹುದು.
ಫೈನಲ್ ಸೋಲಿಗೆ ಸೇಡು ಸಾಧ್ಯವೇ?
ಈ ಸೆಮಿಫೈನಲ್ 2020ರ ವಿಶ್ವಕಪ್ ಫೈನಲ್‌ನ ಮರು ಪಂದ್ಯ. ಅಂದು ಮೆಲ್ಬರ್ನ್ನಲ್ಲಿ ಭಾರತ- ಆಸ್ಟ್ರೇಲಿಯ ಮುಖಾಮುಖಿ ಆಗಿದ್ದವು. ಆಸೀಸ್ 85 ರನ್ನುಗಳಿಂದ ಭಾರತವನ್ನು ಮಣಿಸಿ ಚಾಂಪಿ ಯನ್ ಆಗಿತ್ತು. ಆತಿಥೇಯ ಆಸೀಸ್ 4ಕ್ಕೆ 184 ರನ್ ಪೇರಿಸಿದರೆ, ಕೌರ್ ಬಳಗ 19.1 ಓವರ್‌ಗಳಲ್ಲಿ 99ಕ್ಕೆ ಆಲೌಟ್ ಆಗಿತ್ತು. ಅನಂತರ ಇತ್ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆದದ್ದು ಕಳೆದ ವರ್ಷದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ. ಇಲ್ಲಿಯೂ ಆಸ್ಟ್ರೇಲಿಯ ಭಾರತವನ್ನು ಮಣಿಸಿತ್ತು. ಈ ಅವಳಿ ಸೋಲಿಗೆ ಸೇಡು ತೀರಿಸಲು ಭಾರತದಿಂದ ಸಾಧ್ಯವೇ ಎಂಬುದೊಂದು ಪ್ರಶ್ನೆ. ಹಾಗೆಯೇ ಕಳೆದ ವರ್ಷ ಮುಂಬಯಿಯಲ್ಲಿ ಆಡಲಾದ ಟಿ20 ಸರಣಿಯನ್ನೂ ಆಸ್ಟ್ರೇಲಿಯ 4-1 ರಿಂದ ಗೆದ್ದಿತ್ತು ಎಂಬುದನ್ನು ಮರೆಯುವಂತಿಲ್ಲ. ಉಪಾಂತ್ಯದಲ್ಲಿ ಕಳೆದ ಸಲದ 4 ತಂಡಗಳು!
ಕಳೆದ ಸಲದ (2020) ಹಾಗೂ ಈ ಬಾರಿಯ ವಿಶ್ವಕಪ್ ಸೆಮಿಫೈನಲ್ ನಡುವೆ ಸಾಮ್ಯತೆಯೊಂದಿದೆ. ಅದೆಂದರೆ, 2020ರಲ್ಲಿ ಸೆಮಿಫೈನಲ್ ಪ್ರವೇಶಿಸಿದ 4 ತಂಡಗಳೇ ಈ ಸಲದ ಉಪಾಂತ್ಯದಲ್ಲೂ ಕಾಣಿಸಿಕೊಂಡಿರುವುದು! ಇವುಗಳೆಂದರೆ ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ. ಮೂರು ತಂಡಗಳ ನಾಯಕಿಯರಲ್ಲಿ ಬದಲಾವಣೆ ಸಂಭವಿಸಿಲ್ಲ. ಮೆಗ್ ಲ್ಯಾನಿಂಗ್, ಹೀತರ್ ನೈಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರೇ ಇದ್ದಾರೆ. ಆದರೆ ದಕ್ಷಿಣ ಆಫ್ರಿಕಾವನ್ನು ಡೇನ್ ವಾನ್ ನೀಕರ್ಕ್ ಬದಲು ಸುನೆ ಲುಸ್ ಮುನ್ನಡೆಸುತ್ತಿದ್ದಾರೆ. 2020ರ ಸೆಮಿಫೈನಲ್‌ಗಳಲ್ಲಿ ಭಾರತ-ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಪರಸ್ಪರ ಎದುರಾಗಿದ್ದವು. ಈ ಬಾರಿ ಅದಲು ಬದಲಾಗಿದೆ. ಭಾರತ-ಇಂಗ್ಲೆಂಡ್ ನಡುವಿನ ಸಿಡ್ನಿ ಸೆಮಿಫೈನಲ್ ಪಂದ್ಯ ಭಾರೀ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಹೀಗಾಗಿ ಲೀಗ್ ಹಂತದಲ್ಲಿ “ಎ’ ವಿಭಾಗದ ಅಗ್ರಸ್ಥಾನಿಯಾಗಿದ್ದ ಭಾರತಕ್ಕೆ ಫೈನಲ್ ಅವಕಾಶ ಲಭಿಸಿತ್ತು. ಸಿಡ್ನಿಯ ಇನ್ನೊಂದು ಸೆಮಿಫೈನಲ್ ಕೂಡ ಮಳೆಯಿಂದ ಅಡಚಣೆಗೊಳಗಾಗಿ 13 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇಲ್ಲಿ ಡಿ-ಎಲ್ ನಿಯಮದಂತೆ ದಕ್ಷಿಣ ಆಫ್ರಿಕಾವನ್ನು 5 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ ಫೈನಲ್ ಪ್ರವೇಶಿಸಿತ್ತು.