ಕೆಬೆರಾ (ದಕ್ಷಿಣ ಆಫ್ರಿಕಾ): ವನಿತಾ ಟಿ20 ವಿಶ್ವಕಪ್ ಪಂದ್ಯಾ ವಳಿಯ ನಿರ್ಣಾಯಕ ಮುಖಾಮುಖಿಯೊಂದರಲ್ಲಿ ಭಾರತ ಸೋಮವಾರ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್ ಕೌರ್ ಪಡೆ ಕೇವಲ ಗೆದ್ದರಷ್ಟೇ ಸಾಲದು, ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ.
ಇಂಗ್ಲೆಂಡ್ ಎದುರು ಅನುಭವಿಸಿದ ಸೋಲು ಭಾರತದ ಮುನ್ನಡೆಯನ್ನು ಜಟಿಲಗೊಳಿಸಿದೆ. ಆದರೆ ರವಿವಾರ ಪಾಕಿಸ್ಥಾನ ತಂಡ ವೆಸ್ಟ್ ಇಂಡೀಸ್‌ಗೆ 3 ರನ್ನುಗಳಿಂದ ಶರಣಾದುದು ಕೌರ್ ಬಳಗಕ್ಕೊಂದು ರಿಲೀಫ್ ಕೊಟ್ಟಿದೆ. ಈಗಿನ ಲೆಕ್ಕಾಚಾರದಂತೆ ಇಂಗ್ಲೆಂಡ್ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿದೆ. ಮೂರರಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೂ ರನ್‌ರೇಟ್‌ನಲ್ಲಿ ಹಿಂದಿದೆ.
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಕೊರತೆಯಾದದ್ದು ಕೇವಲ 11 ರನ್. ಅಗ್ರ ಕ್ರಮಾಂಕದ ಆಟಗಾರ್ತಿಯರು ಸಿಡಿದು ನಿಂತಿದ್ದರೆ ಗೆಲುವು ಸಾಧ್ಯವಿತ್ತು. ಆದರೆ ಶಫಾಲಿ, ಜೆಮಿಮಾ, ಕೌರ್ ವೈಫಲ್ಯ ಭಾರತವನ್ನು ಕಾಡಿತು. ಮಂಧನಾ ಕ್ರೀಸ್ ಆಕ್ರಮಿಸಿಕೊಂಡರೂ ಪ್ರಯೋಜನವಾಗಲಿಲ್ಲ. ರಿಚಾ ಘೋಷ್ ಭಾರೀ ಹೋರಾಟ ನಡೆಸಿದರೂ ಆಗಲೇ ರನ್‌ರೇಟ್‌ನಲ್ಲಿ ಭಾರೀ ಹೆಚ್ಚಳವಾಗಿತ್ತು. ಸ್ಥಿರ ಪ್ರದರ್ಶನ ನೀಡುತ್ತಿರುವ ರಿಚಾ ಅವರಿಗೆ ಭಡ್ತಿ ಕೊಟ್ಟರೆ ಲಾಭವಾದೀತೇ ಎಂದೂ ಯೋಚಿಸಲಾಗುತ್ತಿದೆ.