ಮಿರ್ಪುರ್: ಭಾರತದ ವನಿತಾ ಕ್ರಿಕೆಟ್ ತಂಡ ಸೀಮಿತ ಓವರ್‌ಗಳ ಪಂದ್ಯದ ಸರಣಿಗಾಗಿ ಬಾಂಗ್ಲಾದೇಶಕ್ಕೆ ತೆರಳಿದ್ದು, ರವಿವಾರ ಮೊದಲ ಟಿ20 ಪಂದ್ಯವನ್ನು ಆಡಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಭಾರತ ಆಡುತ್ತಿರುವ ಮೊದಲ ಪಂದ್ಯಾವಳಿ ಇದಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕಿ, ಸ್ಮತಿ ಮಂಧನಾ ಉಪನಾಯಕಿಯಾಗಿದ್ದಾರೆ.
ನಮ್ಮ ವನಿತೆಯರು ಕೊನೆಯ ಸಲ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡದ್ದು ವನಿತಾ ಐಪಿಎಲ್ ಲೀಗ್‌ನಲ್ಲಿ. ಹೀಗಾಗಿ ದೊಡ್ಡ ಬ್ರೇಕ್ ಬಳಿಕ ನಡೆಯುವ ಈ ಸರಣಿ ಭಾರತಕ್ಕೆ ಭಾರೀ ಸವಾಲಾಗಿ ಪರಿಣಮಿಸಬಹುದು. ಕೆಲವು ಪ್ರಮುಖ ಆಟಗಾರ್ತಿಯರ ಗೈರು ಕೂಡ ಕಾಡುವ ಸಾಧ್ಯತೆ ಇದೆ.
ಕಳೆದೊಂದು ವರ್ಷದಿಂದ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದ ಪೇಸ್ ಬೌಲರ್ ರೇಣುಕಾ ಠಾಕೂರ್ ಮತ್ತು ಕೀಪರ್ ರಿಚಾ ಘೋಷ್ ಗಾಯಾಳಾಗಿರುವ ಕಾರಣ ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ದೀಪ್ತಿ ಶರ್ಮ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಫಿನಿಶಿಂಗ್ ರೋಲ್ ಜವಾಬ್ದಾರಿಯನ್ನು ಇವರು ಹೊರಬೇಕಾಗುತ್ತದೆ. ಹಾಗೆಯೇ ರಿಚಾ ಗೈರಲ್ಲಿ ಪೂಜಾ ವಸ್ತ್ರಾಕರ್ ಮತ್ತು ಅಮನ್‌ಜೋತ್ ಕೌರ್ ಡೆತ್ ಓವರ್‌ಗಳಲ್ಲಿ ಸಿಡಿಯಬೇಕಾಗುತ್ತದೆ.
ಎಡಗೈ ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕ್ವಾಡ್ ಮತ್ತು ರಾಧಾ ಯಾದವ್ ಬದಲು ಮೊದಲ ಸಲ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿರುವ ಅನುಷಾ ಬಾರೆಡ್ಡಿ ಮತ್ತು ರಾಶಿ ಕನೋಜಿಯಾ ಅವರ ಭವಿಷ್ಯಕ್ಕೆ ಈ ಪ್ರವಾಸವೊಂದು ದಿಕ್ಸೂಚಿ ಆಗಬೇಕಿದೆ. ಕಳೆದ ಋತುವಿನ ಹೆಚ್ಚಿನ ಅವಧಿಯನ್ನು ಬೆಂಚ್ ಮೇಲೆಯೇ ಕಳೆದಿದ್ದ ಮೋನಿಕಾ ಪಟೇಲ್ ಮತ್ತು ಮೇಘನಾ ಸಿಂಗ್ ಅವಕಾಶವನ್ನು ಬಾಚಿಕೊಳ್ಳಲು ಪ್ರಯತ್ನಿಸಬೇಕಾದುದು ಅತ್ಯಗತ್ಯ. ದ್ವಿತೀಯ ಕೀಪರ್ ಆಗಿ ಆಯ್ಕೆಯಾಗಿರುವ ಅಸ್ಸಾಮ್‌ನ ಉಮಾ ಚೆಟ್ರಿ ಟೀಮ್ ಇಂಡಿಯಾದ ಹೊಸ ಮುಖವಾಗಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಸವಾಲಿಗೆ ಸಿದ್ಧ
“ಬಾಂಗ್ಲಾದೇಶ ಒಂದು ಅತ್ಯುತ್ತಮ ತಂಡ. ತವರಲ್ಲಿ ಅವರು ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ನಾವು ಸವಾಲಿಗೆ ಸಿದ್ಧರಾಗಿದ್ದೇವೆ’ ಎಂಬುದಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ. ಬಾಂಗ್ಲಾ ತಂಡ ನಿಗರ್ ಸುಲ್ತಾನಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.