Advertisement

Women’s ಟಿ20 ನಿರ್ಣಾಯಕ ಪಂದ್ಯ : ತವರಲ್ಲಿ ಸರಣಿ ಗೆಲ್ಲುವ ಅವಕಾಶ

12:35 AM Jan 09, 2024 | Team Udayavani |

ನವಿ ಮುಂಬಯಿ: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ತವರಲ್ಲಿ ಮೊದಲ ಬಾರಿಗೆ ಟಿ20 ಸರಣಿ ಜಯಿಸುವ ಕೊನೆಯ ಅವಕಾಶ ಭಾರತದ ಮುಂದೆ ಎದುರಾಗಿದೆ. ಮಂಗಳವಾರ ಇಲ್ಲಿ 3ನೇ ಹಾಗೂ ಅಂತಿಮ ಪಂದ್ಯ ಏರ್ಪಡಲಿದ್ದು, ಇದನ್ನು ಗೆಲ್ಲಬೇಕಾದ ಅಗತ್ಯ ಹರ್ಮನ್‌ಪ್ರೀತ್‌ ಕೌರ್‌ ಪಡೆಯದ್ದು.

Advertisement

ಮೊದಲ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ 9 ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತು. ಆದರೆ ರವಿವಾರ ಬ್ಯಾಟಿಂಗ್‌ ಮರೆತಂತೆ ಆಡಿ 6 ವಿಕೆಟ್‌ಗಳ ಸೋಲನ್ನು ಹೊತ್ತುಕೊಂಡಿತು. ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯ, ನಿರ್ಣಾಯಕ ಪಂದ್ಯದಲ್ಲಿ ಯಾವತ್ತೂ ಅಪಾಯಕಾರಿ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಕೌರ್‌ ಬಳಗ ಭಾರೀ ಒತ್ತಡದಲ್ಲಿದೆ.

ಗೆದ್ದದ್ದು ಒಂದೇ ಸರಣಿ
ಈವರೆಗೆ ಆಸ್ಟ್ರೇಲಿಯ ವಿರುದ್ಧ 5 ಟಿ20 ಸರಣಿಗಳನ್ನು ಆಡಿರುವ ಭಾರತ ಒಂದರಲ್ಲಷ್ಟೇ ಜಯ ಸಾಧಿಸಿದೆ. ಈ ಗೆಲುವು 2015-16ರಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಒಲಿದಿತ್ತು. ಆದರೆ ತವರಲ್ಲಿ ಆಸೀಸ್‌ ವಿರುದ್ಧ ಸರಣಿ ಗೆಲುವು ಮರೀಚಿಕೆಯೇ ಆಗುಳಿದಿದೆ.

ಮೊದಲ ಪಂದ್ಯದ ಸಾಧನೆಯನ್ನೇ ಪುನರಾವರ್ತಿಸಿದರೆ ರವಿವಾರವೇ ಭಾರತದಿಂದ ಇತಿಹಾಸ ನಿರ್ಮಾಣಗೊಳ್ಳುತ್ತಿತ್ತು. ಆದರೆ ಅಸ್ಥಿರ ಪ್ರದರ್ಶನ ಹಿನ್ನಡೆಯಾಗಿ ಕಾಡಿತು. ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಕೈಕೊಡುತ್ತಿದೆ. ಇದಕ್ಕೆ ನಾಯಕಿ ಕೌರ್‌ ಅವರ ಕಳಪೆ ಫಾರ್ಮ್ ಮುಖ್ಯ ಕಾರಣ. ಎಲ್ಲ ಮಾದರಿಗಳನ್ನೊಳಗೊಂಡಂತೆ ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಕೌರ್‌ ಅವರಿಂದ ಒಂದೂ ಅರ್ಧ ಶತಕ ದಾಖಲಾಗಿಲ್ಲ. ಕೌರ್‌ ನಿಂತು ಆಡಿದರೆ ಭಾರತಕ್ಕೆ ಸವಾಲಿನ ಮೊತ್ತ ಅಸಾಧ್ಯವೇನಲ್ಲ.

Advertisement

Udayavani is now on Telegram. Click here to join our channel and stay updated with the latest news.

Next