Advertisement

Womens T-20 World Cup: ವಿಂಡೀಸ್ ಸೋಲಿಸಿ 14 ವರ್ಷ ಬಳಿಕ ಫೈನಲ್‌ ಪ್ರವೇಶಿಸಿದ ಕಿವೀಸ್‌!

12:36 AM Oct 19, 2024 | Team Udayavani |

ಶಾರ್ಜಾ: ಮಹಿಳಾ ಟಿ20 ವಿಶ್ವಕಪ್​ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 8 ರನ್​ಗಳ ರೋಚಕ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಭಾನುವಾರ (ಅ.20) ನಡೆಯುವ ಫೈನಲ್​ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಡಲಿದೆ.

Advertisement

ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 129ರನ್​ಗಳ ಸಾಧಾರಣ ಗುರಿ ನೀಡಿ ಅದ್ಭುತ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಿ ರೋಚಕ ಜಯ ಸಾಧಿಸಿತು. ಈ ಗೆಲುವಿನ ಬಳಿಕ 2010ರ ನಂತರ ಇದೇ ಮೊದಲ ಬಾರಿಗೆ ಕಿವೀಸ್ ತಂಡ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 128 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲಿಮ್ಮರ್ ಗರಿಷ್ಠ 33 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು, ಸೂಜಿ ಬೇಟ್ಸ್ 28 ಎಸೆತಗಳಲ್ಲಿ 26 ರನ್‌ಗಳಿಸಿದರು. ತಂಡದ ನಾಯಕಿ ಸೋಫಿ ಡಿವೈನ್ ಕೂಡ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗದೆ 12 ರನ್ ಗಳಿಸಿ ಔಟಾದರು.

ನ್ಯೂಜಿಲೆಂಡ್ ತಂಡವು ಮೊದಲ 8 ಓವರ್‌ಗಳಲ್ಲಿ ಕೇವಲ 48 ರನ್ ಗಳಿಸಿದ್ದರೂ, ನಂತರ ರನ್‌ಗಳ ವೇಗ ಕಡಿಮೆಯಾಗಲು ಪ್ರಾರಂಭಿಸಿತು. ಒಂದು ಸಮಯದಲ್ಲಿ ತಂಡಕ್ಕೆ 120 ರನ್ ತಲುಪುವುದು ಸಹ ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಬ್ರೂಕ್ ಹ್ಯಾಲಿಡೆ ಕೇವಲ 9 ಎಸೆತಗಳಲ್ಲಿ 18 ರನ್ ಗಳಿಸಿದರೆ, ಇಸಾಬೆಲ್ಲಾ ಗೇಜ್ ಕೂಡ 14 ಎಸೆತಗಳಲ್ಲಿ 20 ರನ್ ಗಳಿಸಿ ತಂಡದ ಮೊತ್ತವನ್ನ 128ಕ್ಕೆ ಕೊಂಡೊಯ್ದರು. ವಿಂಡೀಸ್​ ಪರ 4 ಓವರ್ ಎಸೆದ ದಿಯಾಂಡ್ರ ಡಾಟಿನ್ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಡಾಟಿನ್‌ ದಾಖಲೆ
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಬಾರಿ 4 ವಿಕೆಟ್‌ ಗೊಂಚಲು ಪಡೆದ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ನ ಡಿಯಾಂಡ್ರ ಡಾಟಿನ್‌ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಶುಕ್ರವಾರ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 3ನೇ ಬಾರಿಗೆ 4 ವಿಕೆಟ್‌ ಉರುಳಿಸಿ ಈ ಸಾಧನೆ ಮೆರೆದರು. ಕೇವಲ 22 ರನ್ನಿಗೆ ಡಿಯಾಂಡ್ರ 4 ವಿಕೆಟ್‌ಗಳನ್ನು ಕೆಡವಿದರು.

129ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಯಾವ ಹಂತರದಲ್ಲೂ ಚೇಸಿಂಗ್​ನಲ್ಲಿ ಹಿಡಿತ ಸಾಧಿಸಲಿಲ್ಲ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 142 ರನ್​ಗಳ ಗುರಿ ಸುಲಭವಾಗಿ ಬೆನ್ನಟ್ಟಿದ್ದ ವಿಂಡೀಸ್ ಇಂದು ಆರಂಭದಿಂದಲೇ ಪರದಾಡಿತು. ಸ್ವತಃ ನಾಯಕ 21 ಎಸೆತಗಳ ಎದುರಿಸಿ ಕೇವಲ 15ರನ್​ಗಳಿಸಿದರೆ, ಮಾಜಿ ನಾಯಕಿ, ತಂಡದ ಸೀನಿಯರ್ ಬ್ಯಾಟರ್​ ಸ್ಟಫನೀ ಟೇಲರ್ 20 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 13ರನ್​ಗಳಿಸಿದರು. ಇವರಿಬ್ಬರು ಹೆಚ್ಚು ಎಸೆತಗಳನ್ನ ವ್ಯರ್ಥ ಮಾಡಿದ್ದರಿಂದ ಕೊನೆಯಲ್ಲಿ ಬಂದ ಬ್ಯಾಟರ್​ಗಳಿಗೆ ಒತ್ತಡ ಹೆಚ್ಚಾಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು.

Advertisement

ಕೆರ್ ಸ್ಪಿನ್ ಮೋಡಿ ಅರಿಯಲು ವಿಫಲವಾದ ಡಾಟಿನ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಡಾಟಿನ್ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ವಿಂಡೀಸ್​ ವಿಶ್ವಕಪ್ ಆಸೆಯೂ ಕಮರಿತು. ಕೊನೆಯಲ್ಲಿ ಜೈದಾ ಜೇಮ್ಸ್ 8 ಎಸೆತಗಳಲ್ಲಿ 14ರನ್​ಗಳಿಸಿದರಾದರೂ ಇದು ಸೋಲಿನ ಅಂತರವನ್ನಷ್ಟೇ ತಗ್ಗಿಸಿತು. 8ನೇ ಕ್ರಮಾಂಕದಲ್ಲಿ ಬಂದ ಚೆಡಿಯಾನ್ ನೇಷನ್​ 5 ಎಸೆತಗಳಲ್ಲಿ ಶೂನ್ಯ ಸುತ್ತಿದ್ದು ಕೂಡ ತಂಡಕ್ಕೆ ದೊಡ್ಡ ನಷ್ಟ ಉಂಟು ಮಾಡಿತು.

ಮಹಿಳಾ ಟಿ20 ವಿಶ್ವಕಪ್ ಆರಂಭವಾಗಿ 15 ವರ್ಷಗಳಾಗಿದ್ದು, 8 ವಿಶ್ವಕಪ್​ಗಳು ನಡೆದಿವೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಲ್ಲದೇ ಫೈನಲ್ ನಡೆಯಲಿದೆ. ಹಿಂದಿನ 8 ಆವೃತ್ತಿಗಳಲ್ಲಿ  7 ಬಾರಿ ಆಸ್ಟ್ರೇಲಿಯಾ ಫೈನಲ್​ ಪ್ರವೇಶಿಸಿತ್ತು. ಮೊದಲ ಆವೃತ್ತಿ ಹೊರತುಪಡಿಸಿ ಆಸೀಸ್​ ತಂಡ ಎಲ್ಲಾ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next