ಯಲಹಂಕ: ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಲು ಆರ್‌ಎಸ್‌ಎಸ್‌ನಂಥ ಮತೀಯ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಸಂಸದ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ. ಯಲಹಂಕ ಬ್ಲಾಕ್ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಸ್ತ್ರೀಶಕ್ತಿ ಸಂಗಮ ಸಮಾವೇಶ ಉದ್ಘಾಟಿಸಿದರು.
“ಆರ್‌ಎಸ್‌ಎಸ್‌ನಂತಹ ಮತೀಯ ಶಕ್ತಿಗಳು ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿವೆ. ಇವುಗಳಿಗೆ ಮೋದಿ ಸರ್ಕಾರವೂ ಒತ್ತಾಸೆಯಾಗಿ ನಿಂತಿದೆ. ಮಹಿಳೆಯರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಾನಮಾನ, ಮೀಸಲಾತಿಯಂತಹ ಸೌಲಭ್ಯಗಳನ್ನು ನೀಡುತ್ತಿರುವುದು ಕಾಂಗ್ರೆಸ್ ಮಾತ್ರ,’ ಎಂದರು.
“ಮೋಟಮ್ಮ ಮಂತ್ರಿಯಾಗಿದ್ದಾಗ ಸ್ತ್ರೀಶಕ್ತಿ ಸಂಘಗಳ ಪರಿಕಲ್ಪನೆಗೆ ಒತ್ತುನೀಡಿ, ರಾಜ್ಯದಾದ್ಯಂತ ಮಹಿಳಾ ಸಂಘಟನೆಗಳನ್ನು ಬಲಪಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸಂಘಗಳನ್ನು ಒಟ್ಟುಗೂಡಿಸಿ ರಾಜ್ಯ ಸರ್ಕಾರವೇ ಮಹಿಳಾ ಬ್ಯಾಂಕ್ ಒಂದನ್ನು ಸ್ಥಾಪಿಸಿ ಸದಸ್ಯರಿಗೆ ಐದು ಲಕ್ಷದವರೆಗೆ ಬಡ್ಡಿರಹಿತ ಸಾಲಸೌಲಭ್ಯ ನೀಡುವ ಚಿಂತನೆ ನಡೆಯುತ್ತಿದೆ,’ ಎಂದರು.
ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮಾತನಾಡಿ “ಬಿಬಿಎಂಪಿಯು ಜನನಿ, ಸುರûಾ ಯೊಜನೆಗಳನ್ನು ಈಗಾಗಲೇ ಆರಂಭಿಸಿದೆ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮಹಿಳಾ ಸಹಕಾರ ಸಂಘಗಳ ಮೂಲಕ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಾಗೂ ಮಹಿಳೆಯರಿಗೆ ರೂ. 15,000ವರೆಗೆ ಸಾಲ ನೀಡಲಾಗುತ್ತಿದೆ.
ನಗರದಲ್ಲಿ ತೆರೆಯಲಾಗುತ್ತಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು,’ ಎಂದರು. ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಕಾರ್ಪೊರೇಟರ್ ಪದ್ಮಾವತಿ ಅಮರನಾಥ್, ಕಾಂಗ್ರೆಸ್ ಪಕ್ಷದ ಯಲಹಂಕ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು.