ಅಮೀನಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ರಕ್ಕಸಗಿ ಗ್ರಾಪಂ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ಮಾಡಿದರು.
ಗ್ರಾಪಂ ಎದುರು ಬೆಳಗ್ಗೆ ಜಮಾಯಿಸಿದ ಕೂಲಿಕಾರ್ಮಿಕರ ಸಂಘದ ಮಹಿಳೆಯರು ಕೆಲಸ ಕೊಡಿ, ಕೂಲಿ ಕೊಡಿ ಎಂದು ಘೋಷಣೆ ಕೂಗುತ್ತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾನಿರತ ಕೂಲಿಕಾರ್ಮಿಕರ ಸಂಘದ ಮಹಿಳೆಯರು ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗವಿಲ್ಲದೇ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಇದೀಗ ಲಾಕ್‌ಡೌನ್ ಸಡಲಿಕೆಯಾಗಿದ್ದು, ಖಾತ್ರಿ ಯೋಜನೆಯಡಿ ನಿರಂತರ ಕೆಲಸ ನೀಡುವಂತೆ ಗ್ರಾಪಂ ಅಧಿಕಾರಿಗಳಿಗೆ ಮನವಿ-ಪ್ರತಿಭಟನೆ ಮಾಡಿದರೂ ಕೆಲಸ ನೀಡುವಲ್ಲಿ ಗ್ರಾಪಂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಜತೆಗೆ ಕೆಲಸ ನೀಡುವಲ್ಲಿ ತಾರತಮ್ಯ ಅನುಸರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ನಿರಂತರ ಕೆಲಸ ನೀಡುವಂತೆ ಒತ್ತಾಯಿಸಿದರು.
ನರೇಗಾ ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಒಟ್ಟು ಎರಡು ಸಾವಿರ ಕೂಲಿಕಾರ್ಮಿಕರಿದ್ದು, ಸಾಮಾಜಿಕ ಅಂತರ ಕಾಪಾಡುವುದರಿಂದ ಎಲ್ಲರಿಗೂ ಒಂದೇ ಕಡೆ ಕೆಲಸ ನೀಡಲು ಸಾಧ್ಯವಿಲ್ಲ. ಆದ್ದರಿಂದ ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬೇರೆ ಬೇರೆಯಾಗಿ ಹಂತ ಹಂತವಾಗಿ ಕೆಲಸ ನೀಡುತ್ತಿದ್ದೇವೆ. ಇದರಿಂದ ಕೆಲವು ತಾಂತ್ರಿಕ ಸಮಸ್ಯೆ ಉದ್ಭವವಾಗಿದ್ದು, ಬರುವ ದಿನಗಳಲ್ಲಿ ಸಮಸ್ಯೆಯಾಗದಂತೆ ಎಲ್ಲರಿಗೂ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ಕೂಲಿ ಕಾರ್ಮಿಕರ ಸಂಘದ ಸದಸ್ಯೆ ನೀಲಮ್ಮ ಕಟ್ಟಿಮನಿ, ಮಹಾದೇವಿ ಹಡಪದ, ಶಾರದ ಪರನಗೌಡ, ಸಾವಿತ್ರಿ ಸಜ್ಜನ, ಶರಣಮ್ಮ ಸೊಬರದ,ಲಕ್ಷ್ಮೀಭಾಯಿ ಜಾಲಗಾರ, ಗಂಗಮ್ಮ ಹಡಪದ, ಶಾಂತಾಬಾಯಿ ಸಜ್ಜನ ಇತರರಿದ್ದರು.