ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ತಿರುವನಂತಪುರದಲ್ಲಿ ಮಂಗಳವಾರ ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿದರು. ಆದೇಶವನ್ನು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಬೇಕು. ಸದ್ಯ ನೀಡಲಾಗಿರುವ ಆದೇಶದ ವಿರುದ್ಧ ಕೇರಳ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆ ವೇಳೆ, ಕೇಂದ್ರ ಸರಕಾರ ಹಾಗೂ ಕೇರಳ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್‌ನ ಈ ಆದೇಶವು ದೇಗುಲದಲ್ಲಿದ್ದ 800 ವರ್ಷಗಳ ಪದ್ಧತಿಗೆ ಭಂಗ ತಂದಿರುವನ್ನು ಮನಗಾಣಬೇಕು ಎಂದು ಆಗ್ರಹಿಸಿದ ಅವರು, ದೇಗುಲದ ಪಾವಿತ್ರ್ಯವನ್ನು ಉಳಿಸಲು ತಾವು ಸ್ವಯಂಪ್ರೇರಿತವಾಗಿ ಶಬರಿಮಲೆ ದೇಗುಲದಿಂದ ದೂರ ಉಳಿಯುವುದಾಗಿ ಘೋಷಿಸಿದರು. ಹಲವಾರು ಹಿಂದೂ ಪರ ಸಂಘಟನೆಗಳೂ ಮಹಿಳೆಯರಿಗೆ ಬೆಂಬಲ ನೀಡಿದ್ದವು.