ಮುಂಬೈ: ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದೆ. ಶುಕ್ರವಾರ ನಡೆಯುವ ಪ್ಲೇಆಫ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮೂರನೇ ಸ್ಥಾನಿ ಯುಪಿ ವಾರಿಯರ್ ತಂಡವನ್ನು ಎದುರಿಸಲಿದೆ. ಲೀಗ್ ಪಂದ್ಯಗಳ ಬಳಿಕ ಮುಂಬೈ ಮತ್ತು ಡೆಲ್ಲಿ ತಲಾ 12 ಅಂಕ ಗಳಿಸಿದ್ದರೂ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಡೆಲ್ಲಿ ತಂಡ ಫೈನಲಿಗೇರಿತು. ಪ್ಲೇಆಫ್ ಪಂದ್ಯದ ವಿಜೇತ ತಂಡ ಮಾ.26ರಂದು ನಡೆಯುವ ಫೈನಲ್‌ನಲ್ಲಿ ಡೆಲ್ಲಿಯನ್ನು ಎದುರಿಸಲಿದೆ.
ಅನುಭವಿ ಆಟಗಾರ್ತಿಯರನ್ನು ಒಳಗೊಂಡ ಮುಂಬೈ ಬಲಿಷ್ಠವಾಗಿದೆ. ಆದರೆ ಯುಪಿ ತಂಡ ಮಧ್ಯಮ ಕ್ರಮಾಂಕದ ಆಟಗಾರ್ತಿಯರ ನಿರ್ವಹಣೆಯನ್ನು ಅವಲಂಬಿಸಿದೆ. ಮಧ್ಯಮ ಕ್ರಮಾಂಕದಲ್ಲಿ ತಂಡ ಉತ್ತಮ ನಿರ್ವಹಣೆ ನೀಡಿದಲ್ಲಿ ಮೇಲುಗೈ ಸಾಧಿಸಬಹುದು. ಟಹ್ಲಿಯಾ ಮೆಕ್‌ಗ್ರಾಥ್ ಮತ್ತು ಹ್ಯಾರಿಸ್ ಅವರ ಉತ್ತಮ ಆಟದಿಂದಾಗಿ ಯುಪಿ ಪ್ಲೇಆಫ್ಗೆ ತೇರ್ಗಡೆಯಾಯಿತು.
ಲೀಗ್ ಹಂತದ ಪಂದ್ಯಗಳನ್ನು ಗಮನಿಸಿದರೆ ಯುಪಿಗಿಂತ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡ ಉತ್ತಮ ಆಟಗಾರ್ತಿಯರನ್ನು ಹೊಂದಿದೆ. ಹ್ಯಾಲೀ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ಅಮೇಲಿಯಾ ಕೆರ್ ಉತ್ತಮ ಫಾರ್ಮ್ನಲ್ಲಿದ್ದರೆ ಸೈಕಾ ಇಶಾಕ್, ಅಮೇಲಿಯಾ ಕೆರ್ ಬೌಲಿಂಗ್‌ನಲ್ಲಿ ಮಿಂಚಲಿದ್ದಾರೆ. ಮುಂಬೈನ ಮೂವರು ಆಟಗಾರ್ತಿಯರು 11ಕ್ಕಿಂತ ಹೆಚ್ಚಿನ ವಿಕೆಟ್ ಹಾರಿಸಿದ ಸಾಧನೆ ಮಾಡಿದ್ದಾರೆ.