Advertisement

IPL; ದ್ವಿತೀಯ ಸುತ್ತಿನ ಕದನ ಆರಂಭ: ಎದ್ದು ನಿಂತು ಹೋರಾಡಲಿ ಆರ್‌ಸಿಬಿ

12:35 AM Apr 21, 2024 | Team Udayavani |

ಕೋಲ್ಕತಾ: “ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂಬ ಸಾಲುಗಳಿಗೆ ವ್ಯತಿರಿಕ್ತ ರೀತಿಯ ಅರ್ಥ ನೀಡಲು ಹೊರಟಂತಿರುವ ಬೆಂಗಳೂರು ತಂಡ ರವಿವಾರದಿಂದ ದ್ವಿತೀಯ ಸುತ್ತಿನ ಹೋರಾಟಕ್ಕೆ ಇಳಿಯಲಿದೆ. ಮೊದಲ ಸುತ್ತಿನ 7 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು,ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ವನ್ನು ಗಟ್ಟಿಗೊಳಿಸಿರುವ ಕನ್ನಡಿಗರ ನೆಚ್ಚಿನ ಫ್ರಾಂಚೈಸಿ ಮೇಲೆ ಎಲ್ಲರಿಗೂ ಒಂಥರ ವೈರಾಗ್ಯ ಮೂಡಿದೆ. ಇದನ್ನು ಹೋಗಲಾಡಿಸಿ, ತಂಡದ ಮೇಲೆ ವಿಶ್ವಾಸ ಮರುಕಳಿಸುವ ರೀತಿಯಲ್ಲಿ ಡು ಪ್ಲೆಸಿಸ್‌ ಪಡೆ ಹೋರಾಟ ಸಂಘಟಿಸಬೇಕಿದೆ.

Advertisement

ಇದು ಆರ್‌ಸಿಬಿಯ “ಗೋ ಗ್ರೀನ್‌ ಮ್ಯಾಚ್‌’ ಆಗಿದ್ದು, ಎಲ್ಲರೂ ಹಸುರು ಉಡುಗೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಹಸಿರು ಆರ್‌ಸಿಬಿಗೆ ಉಸಿರು ತುಂಬೀತೇ ಎಂಬುದು ಎಲ್ಲರ ನಿರೀಕ್ಷೆ.

ಈಗಿನ ಸ್ಥಿತಿಯಲ್ಲಿ ಆರ್‌ಸಿಬಿ ಕಟ್ಟಕಡೆಯ ಸ್ಥಾನದಿಂದ ಕನಿಷ್ಠ 4ನೇ ಸ್ಥಾನಕ್ಕೆ ಏರಿ ಪ್ಲೇ ಆಫ್ ಪ್ರವೇಶಿಸು ವುದು ಕಷ್ಟ ಅಥವಾ ಅಸಾಧ್ಯವೆಂದೇ ಹೇಳಬೇಕು. ಇಲ್ಲಿ ಪವಾಡವೇ ಸಂಭವಿಸಬೇಕು. ಆದರೆ ಉಳಿದ ಏಳೂ ಪಂದ್ಯಗಳನ್ನು ಗೆದ್ದರೆ ಇದು ಸಾಧ್ಯ ಎನ್ನುತ್ತದೆ ಲೆಕ್ಕಾಚಾರ. ಆಗ ಆರ್‌ಸಿಬಿಯ ಒಟ್ಟು ಅಂಕ 16ಕ್ಕೆ ಏರುತ್ತದೆ. 4ನೇ ಸ್ಥಾನದೊಂದಿಗೆ ಮುಂದಿನ ಸುತ್ತಿಗೇರಲು ಇಷ್ಟು ಅಂಕ ಸಾಕು. ಆದರೆ ಸತತ 5 ಪಂದ್ಯಗಳನ್ನು ಸೋತ ತಂಡವೊಂದಕ್ಕೆ ಉಳಿದೆಲ್ಲ ಪಂದ್ಯಗಳನ್ನು ಗೆಲ್ಲುವಂಥ ಜೋಶ್‌, ಅಷ್ಟೊಂದು ಸಾಮರ್ಥ್ಯ, ಇಚ್ಛಾಶಕ್ತಿ ಇದೆಯೇ ಎಂಬುದಷ್ಟೇ ಪ್ರಶ್ನೆ!

ಲೆಕ್ಕದ ಭರ್ತಿಯ ಬೌಲಿಂಗ್‌
“ಬೌಲಿಂಗ್‌ ಕುರಿತು ಹೇಳಬೇ ಕೆಂದರೆ, ನಮ್ಮಲ್ಲಿ ಘಾತಕ ಅಸ್ತ್ರಗಳಿಲ್ಲ. ದುರದೃಷ್ಟವಶಾತ್‌ ಇದು ಬ್ಯಾಟರ್‌ಗಳ ಮೇಲೆ ಒತ್ತಡ ಹೇರುತ್ತದೆ. ಇಂಥ ವೇಳೆ ನಾವು ನಮ್ಮ ಫಾರ್ಮ್ಗೆ ತಕ್ಕ ಪ್ರದರ್ಶನ ನೀಡಬೇಕು ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ನಾವು ಸ್ಕೋರ್‌ಬೋರ್ಡ್‌ನಲ್ಲಿ ಎಷ್ಟು ಹೆಚ್ಚು ರನ್‌ ದಾಖಲಿಸುತ್ತೇವೋ ಅಷ್ಟು ಲಾಭಕರ. ಇದರಿಂದ ಸ್ಪರ್ಧೆ ಯಲ್ಲಿ ಉಳಿಯಬಹುದು’ ಎಂದು ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌ ಅಭಿಪ್ರಾಯಪಟ್ಟಿದ್ದಾರೆ. ಹೈದರಾ ಬಾದ್‌ಗೆ 287 ರನ್‌ ಬಿಟ್ಟುಕೊಟ್ಟ ಬೌಲಿಂಗ್‌ ಪಡೆಯಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವುದಾದರೂ ಹೇಗೆ ಎಂಬಂತಿತ್ತು ಅವರ ಹೇಳಿಕೆ.

11.5 ಕೋಟಿ ರೂ. ಮೊತ್ತದ ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್, ಮೊಹಮ್ಮದ್‌ ಸಿರಾಜ್‌ ಈವರೆಗೆ ಫಾರ್ಮ್ ತೋರುವಲ್ಲಿ ವಿಫ‌ಲರಾಗಿದ್ದಾರೆ. ಇವರಿಬ್ಬರೂ ಹೈದರಾಬಾದ್‌ ವಿರುದ್ಧ ಆಡಿರಲಿಲ್ಲ. ಜೋಸೆಫ್ ಆಡಿದ 3 ಪಂದ್ಯಗಳಲ್ಲಿ ಉರುಳಿಸಿದ್ದು ಒಂದು ವಿಕೆಟ್‌ ಮಾತ್ರ. ಓವರಿಗೆ 11.89 ರನ್‌ ಬಿಟ್ಟುಕೊಟ್ಟಿದ್ದಾರೆ. ರೀಸ್‌ ಟಾಪ್ಲಿ, ಲಾಕಿ ಫ‌ರ್ಗ್ಯುಸನ್‌ ಕೂಡ ದುಬಾರಿ ಯಾಗಿ ಪರಿಣಮಿಸಿದ್ದು ಆರ್‌ಸಿಬಿ ಬೌಲಿಂಗ್‌ ವಿಭಾಗಕ್ಕೆ ಬಡಿದ ಗ್ರಹಚಾರಕ್ಕೆ ಸಾಕ್ಷಿ.

Advertisement

ಬಿಗ್‌ ಹಿಟ್ಟಿಂಗ್‌ ಬ್ಯಾಟರ್
ಆರಂಭದಿಂದ ಕೊನೆಯ ತನಕ ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ಕೋಲ್ಕತಾವನ್ನು ಅವರದೇ ಅಂಗಳ ದಲ್ಲಿ ನಿಯಂತ್ರಿಸುವುದು ಖಂಡಿತ ಸುಲಭವಲ್ಲ. ಆದರೆ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಇಂಥದೊಂದು ಸಾಹಸ ಮಾಡಿತ್ತು. 2 ವಿಕೆಟ್‌ಗಳ ರೋಚಕ ಜಯ ಸಾಧಿ
ಸಿತ್ತು. ಕೆಕೆಆರ್‌ 223 ರನ್‌ ಪೇರಿಸಿದ ಹೊರತಾಗಿಯೂ ಪಂದ್ಯವನ್ನು ಉಳಿಸಿ ಕೊಳ್ಳುವಲ್ಲಿ ವಿಫ‌ಲವಾಗಿತ್ತು. ಹೀಗಾಗಿ ಸೋತಲ್ಲೇ ಗೆಲುವನ್ನು ಹುಡುಕುವ ಯೋಜನೆ ಕೋಲ್ಕತಾದ್ದು.

ಸದ್ಯ ಆರ್‌ಸಿಬಿಯ ನಂಬಲರ್ಹ ಬ್ಯಾಟರ್‌ಗಳು 2-3 ಮಂದಿ ಮಾತ್ರ. ಕೊಹ್ಲಿ, ಕಾರ್ತಿಕ್‌ ಹಾಗೂ ಡು ಪ್ಲೆಸಿಸ್‌. ಉಳಿದವರಲ್ಲಿ ಯಾರಾದರೊಬ್ಬರು ಕ್ರೀಸ್‌ ಆಕ್ರಮಿಸಿಕೊಂಡರೆ ಅದೇ ಹೆಚ್ಚು. ಸುನೀಲ್‌ ನಾರಾಯಣ್‌, ಸ್ಟಾರ್ಕ್‌, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ, ವೈಭವ್‌ ಅರೋರ ಅವರ ನ್ನೊಳಗೊಂಡ ಕೆಕೆಆರ್‌ ಬೌಲಿಂಗ್‌ ಪಡೆ ಆರ್‌ಸಿಗಿಂತ ಎಷ್ಟೋ ಬಲಿಷ್ಠ. ಆದರೂ ಇವರೆಲ್ಲ ರಾಜಸ್ಥಾನ್‌ ವಿರುದ್ಧ ಚೆನ್ನಾಗಿ ದಂಡಿಸಿಕೊಂಡಿದ್ದರು. ರಾಜಸ್ಥಾನ್‌ ಸಾಧನೆಯನ್ನು ಪುನರಾ ವರ್ತಿಸಬೇಕಾದ ತುರ್ತು ಅಗತ್ಯ ಆರ್‌ಸಿಬಿ ಮುಂದಿದೆ.

ಮೊದಲ ಸುತ್ತಿನಲ್ಲಿ…
ಇತ್ತಂಡಗಳ ಮೊದಲ ಸುತ್ತಿನ ಪಂದ್ಯ ಮಾ. 29ರಂದು ಬೆಂಗಳೂರಿನಲ್ಲಿ ನಡೆದಿತ್ತು. ಇದನ್ನು ಕೆಕೆಆರ್‌ 7 ವಿಕೆಟ್‌ಗಳಿಂದ ಗೆದ್ದಿತ್ತು. ಆರ್‌ಸಿಬಿ 6ಕ್ಕೆ 182 ರನ್‌ ಹೊಡೆದರೆ, ಕೆಕೆಆರ್‌ 16.5 ಓವರ್‌ಗಳಲ್ಲೇ 3 ವಿಕೆಟಿಗೆ 186 ರನ್‌ ಬಾರಿಸಿ ಗೆದ್ದು ಬಂದಿತ್ತು.
ಆರ್‌ಸಿಬಿ ಪರ ಕೊಹ್ಲಿ ಅಜೇಯ 83, ಗ್ರೀನ್‌ 33 ರನ್‌, ಮ್ಯಾಕ್ಸ್‌ ವೆಲ್‌ 28 ರನ್‌ ಮಾಡಿದ್ದರು. ಚೇಸಿಂಗ್‌ ವೇಳೆ ವೆಂಕಟೇಶ್‌ ಅಯ್ಯರ್‌ 50, ಸುನೀಲ್‌ ನಾರಾಯಣ್‌ 47 ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ ಅಜೇಯ 39 ರನ್‌ ಹೊಡೆದು ಸುಲಭ ಜಯ ತಂದಿತ್ತಿದ್ದರು.
ಸುನೀಲ್‌ ನಾರಾಯಣ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

ತವರಿನ ಲಕ್‌ಗೆ ಕಾದಿದೆ ಪಂಜಾಬ್‌
ಮುಲ್ಲಾನ್‌ಪುರ್‌ (ಪಂಜಾಬ್‌): ತೀರಾ ಸಾಮಾನ್ಯ ಮಟ್ಟದ ಆಟವಾಡಿ ಅಂಕಪಟ್ಟಿಯ ತಳಭಾಗದಲ್ಲಿರುವ ಪಂಜಾಬ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ರವಿವಾರ ರಾತ್ರಿ ಸೆಣಸಾಟಕ್ಕಿಳಿಯಲಿದ್ದು, ಎರಡೂ ತಂಡಗಳು ಸೋಲಿನ ಸುಳಿಯಿಂದ ಮೇಲೆದ್ದು ಬರಬೇಕಾದ ಸಂಕಟದಲ್ಲಿವೆ.
ಇದು ಪಂಜಾಬ್‌ ಪಾಲಿಗೆ ತವರಿನ ಪಂದ್ಯವಾದರೂ ಲಕ್‌ ಕೈಕೊಡುತ್ತಲೇ ಇದೆ. ಅಶುತೋಷ್‌ ಶರ್ಮ ಮತ್ತು ಶಶಾಂಕ್‌ ಸಿಂಗ್‌ ಹೊರತುಪಡಿಸಿದರೆ ಪಂಜಾಬ್‌ ಬಳಿ ಮ್ಯಾಚ್‌ ವಿನ್ನರ್‌ಗಳೇ ಗೋಚರಿಸುತ್ತಿಲ್ಲ. ನಾಯಕ ಶಿಖರ್‌ ಧವನ್‌ ಗಾಯಾಳಾಗಿ ಹೊರಗುಳಿದಿರುವುದು ದೊಡ್ಡ ಹೊಡೆತ. ಸದ್ಯ 7 ಪಂದ್ಯಗಳಲ್ಲಿ ಎರಡನ್ನಷ್ಟೇ ಗೆದ್ದು 9ನೇ ಸ್ಥಾನದಲ್ಲಿದೆ.

ಗುಜರಾತ್‌ ಮಾಜಿ ಚಾಂಪಿಯನ್‌. ಕಳೆದ ಸಲದ ರನ್ನರ್ ಅಪ್‌. ಆದರೆ ಈ ಬಾರಿ ತೀರಾ ನಿರಾಶಾದಾಯಕ ಆಟವಾಡುತ್ತಿದೆ. ಏಳರಲ್ಲಿ ಮೂರನ್ನು ಗೆದ್ದು, ನಾಲ್ಕನ್ನು ಸೋತಿದೆ. ಅಂಕಪಟ್ಟಿಯಲ್ಲಿ ಪಂಜಾಬ್‌ಗಿಂತ ಒಂದು ಸ್ಥಾನ ಮೇಲಿದೆ. ಕ್ವಾಲಿಟಿ ಬ್ಯಾಟರ್‌ಗಳನ್ನು ಹೊಂದಿಯೂ ಡೆಲ್ಲಿ ವಿರುದ್ಧ 89 ರನ್ನಿಗೆ ಆಲೌಟ್‌ ಆಗಿ ಅಚ್ಚರಿ ಮೂಡಿಸಿತ್ತು. ಈ ಕಳಂಕದಿಂದ ಪಾರಾಗಬೇಕಿದೆ.

ಮೊದಲ ಸುತ್ತಿನಲ್ಲಿ…
ಈ ಎರಡು ತಂಡಗಳು ಎ. 7ರಂದು ಅಹ್ಮದಾಬಾದ್‌ನಲ್ಲಿ ಎದುರಾಗಿದ್ದವು. ಇದೊಂದು ದೊಡ್ಡ ಮೊತ್ತದ ಹೋರಾಟವಾಗಿತ್ತು. ಆತಿಥೇಯ ಗುಜರಾತನ್ನು ಪಂಜಾಬ್‌ 3 ವಿಕೆಟ್‌ಗಳಿಂದ ಮಣಿಸಿತ್ತು. ನಾಯಕ ಗಿಲ್‌ (89) ನೆರವಿನಿಂದ ಗುಜರಾತ್‌ 4 ವಿಕೆಟಿಗೆ 199 ರನ್‌ ಪೇರಿಸಿದರೆ, ದಿಟ್ಟ ಜವಾಬು ನೀಡಿದ ಪಂಜಾಬ್‌ 19.5 ಓವರ್‌ಗಳಲ್ಲಿ 7 ವಿಕೆಟಿಗೆ 200 ರನ್‌ ಬಾರಿಸಿ ಗೆದ್ದು ಬಂದಿತ್ತು. ಶಶಾಂಕ್‌ ಸಿಂಗ್‌ ಅಜೇಯ 61, ಅಶುತೋಷ್‌ ಶರ್ಮ 31 ರನ್‌ ಸಿಡಿಸಿ ಪಂಜಾಬ್‌ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next