ಹೊಸದಿಲ್ಲಿ: ಸೇನೆಯಲ್ಲಿ ಈವರೆಗೆ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇನ್ನು ಪೊಲೀಸರಾಗಿಯೂ ಕೆಲಸ ಮಾಡಬಹುದು. ಪುರುಷರಿಗೆ ಸಮಾನವಾಗಿ ಮಹಿಳೆ ಯರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸುತ್ತಿಲ್ಲ ಎಂಬ ಆರೋಪದ ಮಧ್ಯೆ ಇದು ಮಹತ್ವದ ಮೈಲುಗಲ್ಲಾಗಿದ್ದು, ಇದೇ ಮೊದಲ ಬಾರಿಗೆ ಸೇನಾ ಪೊಲೀಸ್ ಹುದ್ದೆಗೆ ಮಹಿಳೆಯ ರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ಗುರುವಾರದಿಂದ ಆನ್‌ಲೈನ್ ನೋಂದಣಿ ಆರಂಭವಾಗಿದ್ದು, ಜೂನ್ 8ರ ವರೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಮಹಿಳೆಯರನ್ನು ನೇಮಿಸುವ ಪ್ರಕ್ರಿಯೆಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಧಿಕಾರ ವಹಿಸಿಕೊಂಡಾ ಗಲೇ ಆರಂಭಿಸಿದ್ದರು ಎಂದು ಸೇನೆ ಮೂಲಗಳು ತಿಳಿಸಿವೆ.
ಕಳೆದ ಜನವರಿಯಲ್ಲಿ ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದು, ಮಿಲಿಟರಿ ಪೊಲೀಸ್ ವಿಭಾಗದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ನಾವು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದರು.
800 ಪೊಲೀಸರ ನೇಮಕ: ಸದ್ಯ ಒಟ್ಟು 800 ಮಹಿಳಾ ಪೊಲೀಸರ ನೇಮಕಕ್ಕೆ ನಿರ್ಧರಿಸಲಾಗಿದ್ದು, ಪ್ರತಿ ವರ್ಷ 52 ಮಹಿಳೆಯರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಹಂತ ಹಂತವಾಗಿ ಮಹಿಳೆಯರ ನೇಮಕಾತಿಯನ್ನು ಹೆಚ್ಚಿಸಿ ಒಟ್ಟು ಮಿಲಿಟರಿ ಪೊಲೀಸ್ ವಿಭಾಗದಲ್ಲಿ ಶೇ.20ರಷ್ಟು ಮಹಿಳೆ ಯರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಮಿಲಿಟರಿ ಪೊಲೀಸರು ಸಾಮಾನ್ಯ ಯೋಧರಂತೆ ಗಡಿಯಲ್ಲಿ ನಿಂತು ಕಾರ್ಯಾಚರಣೆ ಮಾಡುವ ಸಾಧ್ಯತೆ ಕಡಿಮೆ. ಈ ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಪ್ರಕ್ರಿಯೆಯಾಗಿದೆ.
ಇವರ ಕೆಲಸ ಏನು?
ಮಿಲಿಟರಿ ಪೊಲೀಸ್ ವಿಭಾಗವು ಅಪರಾಧ ಪ್ರಕರಣಗಳಲ್ಲಿ ತನಿಖೆ ನಡೆಸುವ ಮಹತ್ವದ ಕೆಲಸ ಮಾಡುತ್ತದೆ. ಇದರೊಂದಿಗೆ ತುರ್ತು ಸಂದರ್ಭಗಳಲ್ಲಿ ಸೇನಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ. ಕಂಟೋನ್‌ಮೆಂಟ್‌ಗಳ ನಿಗಾ ವಹಿಸುವುದು, ಯೋಧರು ನೀತಿ ನಿಯಮಗಳನ್ನು ಉಲ್ಲಂಘಿಸದಂತೆ ಕಾಯುವುದು, ಯೋಧರ ಸಾಗಣೆ ಹಾಗೂ ಸ್ಥಳಾಂತರದ ವೇಳೆ ನಿಗಾ ವಹಿಸುವುದು ಹಾಗೂ ಯುದ್ಧದ ವೇಳೆ ಸರಕು ಸಾಗಣೆ ಮಾಡುವುದು ಈ ಮಿಲಿಟರಿ ಪೊಲೀಸರ ಕೆಲಸ.